ಮಂಗಳೂರು : ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಅನನ್ಯಾ ಭಟ್ ನಾಪತ್ತೆ ಕೇಸ್ನ ತನಿಖೆಯನ್ನ ಎಸ್ಐಟಿ ಅಂತ್ಯಗೊಳಿಸಿದೆ. ಮಗಳು ಧರ್ಮಸ್ಥಳದಲ್ಲಿ ಕಾಣೆ ಆಗಿದ್ದಾಳೆ ಎಂದು ಸುಜಾತಾ ಭಟ್ ದೂರು ನೀಡಿದ್ದರು. ಆದರೆ ತನಿಖೆ ವೇಳೆ ತಾನು ಸುಳ್ಳು ದೂರು ನೀಡಿದ್ದಾಗಿ ಅವರು ತಪ್ಪೊಪ್ಪಿಕೊಂಡಿರುವ ಹಿನ್ನಲೆ ತನಿಖೆ ಅಂತ್ಯಗೊಳಿಸಲಾಗಿದೆ. ಪ್ರಕರಣ ಸಂಬಂಧ ಸುಜಾತಾ ಭಟ್ ಅವರ ದೂರು ಅರ್ಜಿ ವಿಲೆ ಮಾಡಲಾಗಿರುತ್ತೆಂದು ಎಸ್ಐಟಿ ಅಧಿಕಾರಿಗಳು ಹಿಂಬರಹ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೆಣ ಹೂಳಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೋರ್ವ ಮಾಡಿದ್ದ ಆರೋಪ ದೇಶಾದ್ಯಂತ ಬಿರುಗಾಳಿ ಎಬ್ಬಿಸಿತ್ತು. ಈ ಸಂದರ್ಭದಲ್ಲಿ ಪ್ರತ್ಯಕ್ಷವಾಗಿದ್ದ ಸುಜಾತಾ ಭಟ್ ಎಂಬವರು ತನ್ನ ಮಗಳು ಮಗಳು ಧರ್ಮಸ್ಥಳದಲ್ಲಿ ಕಾಣೆ ಆಗಿದ್ದಾಳೆ ಎಂದು ದೂರು ನೀಡಿದ್ದರು.
2003ರಲ್ಲಿ ಮಣಿಪಾಲದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಾಗ ತನ್ನ ಮಗಳು ನಾಪತ್ತೆಯಾಗಿದ್ದು, ಆಕೆಯನ್ನು ಧರ್ಮಸ್ಥಳದಲ್ಲಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರಕರಣ ಗಂಭೀರತೆ ಪಡೆದುಕೊಂಡ ಕಾರಣ, ಇದರ ತನಿಖೆಯನ್ನ ಎಸ್ಐಟಿಗೆ ಸರ್ಕಾರ ಹಸ್ತಾಂತರಿಸಿತ್ತು.
ತನಿಖೆ ವೇಳೆ ಸುಜಾತಾ ಭಟ್ ದಿನಕ್ಕೊಂದು ಕತೆ ಹೇಳಿದ್ದು, ಯಾರದ್ದೋ ಫೋಟೋ ತೋರಿಸಿ ಇವಳೇ ನನ್ನ ಮಗಳು ಅನನ್ಯಾ ಭಟ್ ಎಂದು ಆರಂಭದಲ್ಲಿ ಹೇಳಿದ್ದರು. ಆದರೆ ಅದು ಅವರ ಮಗಳ ಫೋಟೋವಲ್ಲ, ಬದಲಾಗಿ ವಾಸಂತಿ ಎಂಬವರ ಫೋಟೋ ಎಂಬ ವಿಷಯ ರಿವೀಲ್ ಆಗಿತ್ತು. ಆ ಬಳಿಕ ತಮ್ಮ ಹೇಳಿಕೆ ಬದಲಾಯಿಸಿದ್ದ ಸುಜಾತಾ ಭಟ್ ಆಕೆ ತನ್ನ ಸ್ನೇಹಿತರ ಮಗಳು ಎಂದು ಹೇಳಿಕೊಂಡಿದ್ದರು.
ಸೋಮೆಶ್ವರದ ಅರವಿಂದ್ ಮತ್ತು ವಿಮಲಾ ದಂಪತಿ ಮಗಳು ಎಂದು ತಿಳಿಸಿದ್ದರು. ಅಂತಿಮವಾಗಿ ತಾವು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡಿದ್ದ ಸುಜಾತಾ ಭಟ್, ಧರ್ಮಸ್ಥಳ ಪ್ರಕರಣದ ಸಂಬಂಧ ಬುರುಡೆ ಗ್ಯಾಂಗ್ ಜೊತೆ ಸೇರಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪವಿದೆ. ಯಾರದ್ದೋ ಮಾತು ಕೇಳಿ ತಮ್ಮ ಜೀವನ ಹಾಳು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ.
ಈ ಬಗ್ಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆಯಾಚಿಸುತ್ತೇನೆ. ಈ ವಿಚಾರದಲ್ಲಿ ತಮ್ಮೊಂದಿಗೆ ಇದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಮಟ್ಟಣ್ಣವರ್ ಸೇರಿದಂತೆ ಯಾರೂ ಈಗ ತಮ್ಮ ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವೈಯಕ್ತಿಕ ಜೀವನದ ಮೇಲೆ ಇದು ಪರಿಣಾಮ ಬೀರಿದ್ದು, ತಮ್ಮ ಪಾಡಿಗೆ ತಾವು ಬದುಕಲು ಬಯಸುವುದಾಗಿ ತಿಳಿಸಿದ್ದರು.















