ಮನೆ ರಾಜ್ಯ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಎಸ್‌.ಎಲ್ ಭೈರಪ್ಪ ಅಂತ್ಯಕ್ರಿಯೆ..!

ಬ್ರಾಹ್ಮಣ ಸಂಪ್ರದಾಯದಂತೆ ಇಂದು ಎಸ್‌.ಎಲ್ ಭೈರಪ್ಪ ಅಂತ್ಯಕ್ರಿಯೆ..!

0

ಮೈಸೂರು : ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಎಸ್.ಎಲ್ ಭೈರಪ್ಪ ವಿಧಿವಶ ಹಿನ್ನೆಲೆ, ಮೈಸೂರಿನಲ್ಲಿಂದು ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಸರಸ್ವತಿ ಪುತ್ರನ ಅಂತ್ಯಕ್ರಿಯೆ ನೆರವೇರಲಿದೆ.

ಪ್ಯಾನ್ ಇಂಡಿಯಾ ನಾವಲಿಸ್ಟ್ ಭೈರಪ್ಪ ಈ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಬರವಣಿಗೆಯ ಮೂಲಕವೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದ, 94 ವರ್ಷದ ಸಾಹಿತಿ ಮೊನ್ನೆ ವಯೋಸಹಜ ಖಾಯಿಲೆಯಿಂದ ನಿಧನ ಹೊಂದಿದರು. ಇವರ ಸಾವಿಗೆ ಇಡೀ ಕರುನಾಡೇ ಮರುಕ ಪಟ್ಟಿತು. ಇಂದು ಇವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ, ಈಗಾಗಲೇ ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಂಡಿದೆ. ಇಂದು 11:30 ಗಂಟೆಗೆ ಬ್ರಾಹ್ಮಣ ಸಂಪ್ರದಾಯದಂತೆ ಎಸ್‌.ಎಲ್ ಭೈರಪ್ಪ ಅಂತ್ಯಕ್ರಿಯೆ ನೆರವೇರಲಿದೆ.

ಪದ್ಮಭೂಷಣ ಎಸ್‌ಎಲ್ ಭೈರಪ್ಪನವರ ಸಾವಿಗೆ ಇಡೀ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದ್ದು ಇವರ ಅಂತಿಮ ದರ್ಶನಕ್ಕೆ ಇವರ ಓದುಗ ಬಳಗ ಮತ್ತು ಅಭಿಮಾನಿಗಳು ಸಾಗರದಂತೆ ಹರಿದು ಬಂದಿತು.

ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಅಂತಿಮ ದರ್ಶನ ಬಳಿಕ ಮೈಸೂರಿಗೆ ಪಾರ್ಥಿವ ಶರೀರ ತಂದು ಮೈಸೂರಿನ ಕಲಾಮಂದಿರಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮೃತದೇಹವನ್ನು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಶವಗಾರದಲ್ಲಿ ಇರಿಸಲಾಯಿತು. ಇಂದು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಯಿಂದ ನೇರವಾಗಿ ಮೈಸೂರಿನ ಕುವೆಂಪು ನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮನೆಯ ಬಳಿಯೂ ಕೆಲಹೊತ್ತು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 11.00ರ ವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿದ್ದು, ಬಳಿಕ ಕುಟುಂಬಸ್ಥರಿಂದ ಅಂತಿಮ ಪೂಜೆ ವಿಧಿವಿಧಾನ ನಡೆಯಲಿದೆ. ನಂತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ, ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ.

ಹಿರಿಯ ಸಾಹಿತಿಗಳಿಗೆ ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವ ಗಳೊಂದಿಗೆ ಅಂತಿಮ ನಮನ ಸಲ್ಲಿಸಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಕೂಡ ಸೂಚನೆ ನೀಡಿದ್ದು, ಸಿದ್ಧತೆಗಳು ಕೂಡ ಆಗಿದೆ. ಇನ್ನೂ ಇದೇ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಸ್ನೇಹಿತರು, ಕುಟುಂಬಸ್ಥರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.

ದಶಕಗಳ ಕಾಲ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದ, ಎಸ್‌ಎಲ್ ಭೈರಪ್ಪರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟವೇ ಸರಿ. ಒಟ್ಟಾರೆ ಎಸ್‌.ಎಲ್ ಭೈರಪ್ಪ ನವರ 25 ಕಾದಂಬರಿ, 6 ಪ್ರಬಂಧಗಳು, 1 ಆತ್ಮಚರಿತ್ರೆ, 4 ಚಲನಚಿತ್ರವಾದ ಕಾದಂಬರಿಗಳನ್ನು ಈ ಕನ್ನಡ ಸಾಹಿತ್ಯಕ್ಕೆ ನೀಡಿ ಜನಮಾನಸದಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ.