ದುಬೈ : ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 2021ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದು, ಈ ವರ್ಷದಲ್ಲಿ ಐಸಿಸಿ ವಾರ್ಷಿಕ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಕ್ರಿಕೆಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
.2021ರಲ್ಲಿ 22ರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 38.86ರ ಸರಾಸರಿಯಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳ ಸಹಿತ 855 ರನ್ ಸಿಡಿಸುವ ಮೂಲಕ ಸ್ಮೃತಿ ಮಂಧಾನ ವರ್ಷದ ಮಹಿಳಾ ಕ್ರಿಕೆಟರ್ಗೆ ನೀಡುವ ರಚೇಲ್ ಹೇಹೋ ಫ್ಲಿಂಟ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
2018ರಲ್ಲೂ ಮಂಧಾನ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.2021ರಲ್ಲಿ ಭಾರತ ತಂಡದ ಹೇಳಿಕೊಳ್ಳುವಂತಹ ಪ್ರದರ್ಶನ ತೋರದಿದ್ದರೂ ಸ್ಮೃತಿ ಮಾತ್ರ ವರ್ಷ ಪೂರ್ತಿ ಮೂರು ಮಾದರಿಯ ಕ್ರಿಕೆಟ್ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ.
ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 8 ಸೀಮಿತ ಓವರ್ಗಳ ಪಂದ್ಯದಲ್ಲಿ ಭಾರತ 2 ಪಂದ್ಯಗಳಲ್ಲಿ ಮಾತ್ರ ಜಯಿಸಿತ್ತು. ಇವೆರಡು ಗೆಲುವಿನಲ್ಲೂ ಮಂಧಾನ ಪ್ರಮುಖ ಪಾತ್ರವಿತ್ತು. ಏಕದಿನ ಪಂದ್ಯದಲ್ಲಿ 80 ರನ್ ಸಿಡಿಸಿ 158 ರನ್ಗಳನ್ನು ಚೇಸ್ ಮಾಡಲು ನೆರವಾದರೆ, ಕೊನೆಯ ಟಿ20 ಪಂದ್ಯದಲ್ಲಿ ಅಜೇಯ 48 ರನ್ಗಳಿಸಿ ಗೆಲ್ಲಿಸಿದ್ದರು.ಇನ್ನು ಇಂಗ್ಲೆಂಡ್ ವಿರುದ್ಧದ ಡ್ರಾನಲ್ಲಿ ಅಂತ್ಯಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ 78 ರನ್ಗಳಿಸಿದರೆ, ಪ್ರವಾಸದಲ್ಲಿ ಗೆದ್ದ ಏಕೈಕ ಏಕದಿನ ಪಂದ್ಯದಲ್ಲಿ 49 ರನ್ಗಳಿಸಿದ್ದರು.
ಆದರೆ, ಟಿ20 ಮತ್ತು ಏಕದಿನ ಎರಡರಲ್ಲೂ ಭಾರತ ತಂಡ ಸೋಲು ಕಂಡಿತ್ತು.ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಪಂದ್ಯದಲ್ಲಿ ಶತಕ, ಏಕದಿನ ಪಂದ್ಯದಲ್ಲಿ 86 ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು.