ಮನೆ ರಾಜಕೀಯ ಕುತೂಹಲಕ್ಕೆ ಕಾರಣವಾದ ರಮೇಶ್ ಜಾರಕಿಹೊಳಿ- ಯತ್ನಾಳ್ ಸೀಕ್ರೆಟ್‌ ಮೀಟಿಂಗ್‌

ಕುತೂಹಲಕ್ಕೆ ಕಾರಣವಾದ ರಮೇಶ್ ಜಾರಕಿಹೊಳಿ- ಯತ್ನಾಳ್ ಸೀಕ್ರೆಟ್‌ ಮೀಟಿಂಗ್‌

0

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆಗಳು ಕೇಳಿಬರುತ್ತಿರುವ ಬೆನ್ನಲ್ಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವಾರು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿ ರಮೇಶ್ ಅವರನ್ನು ಯತ್ನಾಳ್ ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಶಾಸಕ ಮಹೇಶ್ ಕಮಟಳ್ಳಿ ಕೂಡಾ ಇದ್ದರು.

ಕೆಲ ದಿನಗಳ ಹಿಂದೆಯಷ್ಟೇ ಯತ್ನಾಳ್ ಅವರು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತಲ್ಲದೇ ಯತ್ನಾಳ್ ಅವರ ಈ ನಡೆ, ಬಿಜೆಪಿಯಲ್ಲಿರುವ ಅಸಮಾಧಾನಿತರನ್ನು ಒಟ್ಟುಗೂಡಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ.

ಇನ್ನು ಭೇಟಿಯ ಸಂದರ್ಭದಲ್ಲಿ ನಡೆದ ಮಾತುಕತೆ ಬಗ್ಗೆ ಇಬ್ಬರೂ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಭೇಟಿ ಹಾಗೂ ಮಾತುಕತೆ ಕುರಿತಾಗಿ ಮಾತನಾಡಿದ ಶಾಸಕ ಯತ್ನಾಳ್,ನಾನು ರಮೇಶ ಜಾರಕಿಹೊಳಿ ಊಟಕ್ಕೆ ಸೇರಿದ್ದೆವು. ಸಂಪುಟ ಪುನಾರಚನೆ ಶೀಘ್ರವಾಗಿ ಆಗಬೇಕು. ವಾರದೊಳಗೆ ಮಾಡಿದರೆ ಒಳ್ಳೆಯದು. ನಂತರ ಪುನಾರಚನೆಯಾದರೆ ಉಪಯೋಗ ಇಲ್ಲ ಎಂದರು.
ಕರ್ನಾಟಕದಲ್ಲಿ ಕೆಲ ಮಂದಿ ಚುನಾವಣೆ ವೇಳೆ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ರೀತಿ ಪಕ್ಷ ಬಿಟ್ಟು ಹೋಗ್ತಾರೆ ಎಂದು ಯತ್ನಾಳ್‌ ಅಸಮಾಧಾನ ಹೊರಹಾಕಿದರು. ಕೆಲವರು ಜಾತ್ರೆ ಮಾಡ್ಕೊಂಡು ಹೋಗ್ತಾರೆ. ಈಗಾಗಲೇ ಡಿಕೆ ಶಿವಕುಮಾರ್‌ ಜೊತೆಗೆ ಸೀಟ್ ಬಗ್ಗೆ ಮಾತಾನಾಡಿಕೊಂಡಿದ್ದಾರೆ. ಅದರ ಬಗ್ಗೆ ನಮಗೆ ಮಾಹಿತಿ ಇದೆ. ಚುನಾವಣೆ ಘೋಷಣೆ ನಂತರ ರಾಜೀನಾಮೆ ಕೊಡ್ತಾರೆ. ರಾಜೀನಾಮೆ ಕೊಟ್ಟು ಬೇರೆಡೆಗೆ ಹೋಗ್ತಾರೆ. ನಂತರ ಯತ್ನಾಳ ಬೇಕು ಜಾರಕಿಹೊಳಿ‌ ಬೇಕು ಅಂತ ಹುಡುಕಿದರೆ ಆಗಲ್ಲ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು‌.

ಹಿಂದಿನ ಲೇಖನರಾಜ್ಯ ಸರ್ಕಾರದಲ್ಲಿ ಅಭದ್ರತೆ ಇಲ್ಲ: ವಿ.ಸೋಮಣ್ಣ
ಮುಂದಿನ ಲೇಖನಸ್ಮೃತಿ ಮಂಧಾನಗೆ 2021ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ