ಮನೆ ಸುದ್ದಿ ಜಾಲ ಸಾಮಾಜಿಕ ಕಾರ್ಯ‍ಕರ್ತರು ಅಶಕ್ತರ ನೆರವಿಗೆ ಮುಂದಾಗಿ: ಪ್ರೊ.ಜಿ.ಹೇಮಂತ್ ಕುಮಾರ್

ಸಾಮಾಜಿಕ ಕಾರ್ಯ‍ಕರ್ತರು ಅಶಕ್ತರ ನೆರವಿಗೆ ಮುಂದಾಗಿ: ಪ್ರೊ.ಜಿ.ಹೇಮಂತ್ ಕುಮಾರ್

0

ಮೈಸೂರು:  ಸಮಾಜದಲ್ಲಿ ಇರುವ ಅಶಕ್ತರು, ದುರ್ಬಲರ ನೆರವಿಗೆ ಸಮಾಜ ಕಾರ್ಯಕರ್ತರು ನಿಲ್ಲಬೇಕೆಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿ ಸೆನೆಟ್ ಭವನದಲ್ಲಿ ನಡೆದ ವಿಶ್ವ ಸಮಾಜ ಕಾರ್ಯ ದಿನಾಚರಣೆ ಹಾಗೂ ಏಷ್ಯನ್ ಜರ್ನಲ್ ಆಫ್ ಪ್ರೊಫೆಷನಲ್ ಸೋಶಿಯಲ್ ವರ್ಕ್ ವೆಬ್ ಸೈಟ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಮಾಜ ಕಾರ್ಯಕರ್ತರು ತಮ್ಮ ಸಮುದಾಯಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ಅವರು ತಮ್ಮ ಸಾರ್ವಜನಿಕರ ಅಗತ್ಯತೆಗಳು ಮತ್ತು ಸವಾಲುಗಳನ್ನು ಎದುರಿಸಬೇಕಾದ ಆತ್ಮಸ್ಥೈರ್ಯ ನೀಡುತ್ತಾರೆ. ವಕೀಲರಂತೆ ಅವರ ಮೂಲಭೂತ ಅಗತ್ಯಗಳಿಗಾಗಿ ಮಾತನಾಡುತ್ತಾರೆ. ಅವರ ಜೀವನವನ್ನು ಸುಧಾರಿಸಲು ಅಗತ್ಯವಿರುವ ಸಂಪನ್ಮೂಲಗಳ ಕೊಡಿಸಲು ಪ್ರಯತ್ನಿಸುತ್ತಾರೆ ಪಡೆಯುತ್ತಾರೆ. ಸಮಾಜ ಕಾರ್ಯಕರ್ತರು ಬಿಕ್ಕಟ್ಟಿನ ಸಂದರ್ಭಗಳಲ್ಲೂ ಸ್ಪಂದಿಸುತ್ತಾರೆ ಎಂದು ತಿಳಿಸಿದರು.

ಸಮಾಜ ಕಾರ್ಯದ ಈ ವರ್ಷದ ಥೀಮ್ ಎಂದರೆ ಹೊಸ ಪರಿಸರ ಸಾಮಾಜಿಕ ಪ್ರಪಂಚವನ್ನು ನಿರ್ಮಾಣ ಮಾಡುವುದು: ಯಾರನ್ನೂ ಹಿಂದೆ ಬಿಡದೆ, ಹೊಸ ಜಾಗತಿಕ ಮೌಲ್ಯಗಳು, ನೀತಿಗಳು ಮತ್ತು ಆಚರಣೆಗಳನ್ನು ರಚಿಸುವುದು. ಇದಕ್ಕೆ ಬೇಕಾದ ದೃಷ್ಟಿ ಮತ್ತು ಕ್ರಿಯಾ ಯೋಜನೆಯನ್ನು ಜಾರಿಗೆ ತರುವುದು.  ಎಲ್ಲಾ ಜನರಿಗೆ ನಂಬಿಕೆ, ಭದ್ರತೆ ಮತ್ತು ವಿಶ್ವಾಸವನ್ನು ಮತ್ತು ಭೂಮಿ ಸುಸ್ಥಿರತೆಯನ್ನು ಅಭಿವೃದ್ಧಿಪಡಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ದುರ್ಬಲ ಕುಟುಂಬಗಳ ಮತ್ತು ಸಮುದಾಯಗಳ ಜೀವನ ಮಟ್ಟವನ್ನು ಸಾಮಾಜಿಕ ಕಾರ್ಯಕರ್ತರು ಸುಧಾರಿಸಬೇಕು. ಇದಕ್ಕಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

2022 ರ ವಿಶ್ವ ಸಾಮಾಜಿಕ ಕಾರ್ಯ ದಿನವು ಸಮಾಜ ಕಾರ್ಯ ವೃತ್ತಿಗೆ ಬೇಕಾಗುವ ಎಲ್ಲಾ ಸಂಪರ್ಕ ಸಾಧನಗಳನ್ನು ಬಳಸಿಕೊಳ್ಳಲು ಉದ್ದೇಶ ಹೊಂದಲಾಗಿದೆ. ಎಲ್ಲರಿಗೂ ಘನತೆಯ ಬದುಕು ನಡೆಸಲು ಮೌಲ್ಯಗಳನ್ನು ಬೆಳೆಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯೊಬ್ಬರ ಒಳಗೊಳ್ಳುವಿಕೆ ಅಗತ್ಯವಾಗಿದೆ. ಸಾಮಾಜಿಕ ಕಾರ್ಯಕರ್ತರು, ಪಾಲುದಾರ ಸಂಸ್ಥೆಗಳು ಒಂದಾಗಿ ಹೆಜ್ಜೆ ಹಾಕಿದರೆ ನಿರೀಕ್ಷಿತ ಗುರಿ ತಲುಪಬಹುದು ಎಂದು ಹೇಳಿದರು.

ಸಮಾಜ ಕಾರ್ಯದ ಅಧ್ಯಯನ ವಿಭಾಗವು ಇಂದು ಸಮಾಜಕಾರ್ಯ ಸಮುದಾಯದ ಸಾಧಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಮುದಾಯ ಒಗ್ಗೂಡಲು ಮತ್ತು ಹೊಸ ಪರಿಸರ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹೊಸ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಇದೊಂದು ಅಪರೂಪದ ವೇದಿಕೆ ಎಂದರು.

ಹೈದರಾಬಾದ್ ನ ಮಹಾತ್ಮ ಗಾಂಧಿ ನ್ಯಾಷನಲ್ ಕೌನ್ಸಿಲ್ ಫಾರ್ ರೂರಲ್ ಎಜುಕೇಶನ್ ಡಾ. ಡಬ್ಲ್ಯೂ. ಜಿ.ಪ್ರಸನ್ನ ಕುಮಾರ್, ಎಂಎಸ್ ಡಬ್ಲ್ಯೂ ಅಲ್ಮುನಿ ಅಸೋಸಿಯೇಷನ್ ಅಧ್ಯಕ್ಷ ಡಾ.ಜೇಮ್ಸ್ ಥಾಮಸ್ ಹಾಗೂ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಪಿ.ಜ್ಯೋತಿ, ಸಹ ಪ್ರಾಧ್ಯಾಪಕ ಡಾ.ರಾಜಮೌಳಿ ಸೇರಿದಂತೆ ಇತರರು ಭಾಗವಹಿಸಿದ್ದರು.