ಮೈಸೂರು(Mysuru): ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್ (89) ಅವರು ನಗರದಲ್ಲಿ ಗುರುವಾರ ನಿಧನರಾದರು.
ಮಧ್ಯಾಹ್ನದವರೆಗೂ ಚೈತನ್ಯದಿಂದಲೇ ಇದ್ದ ಅವರಿಗೆ ಏಕಾಏಕಿ ಸುಸ್ತು ಕಾಣಿಸಿಕೊಂಡಿತ್ತು. ಉಸಿರಾಟದ ಸಮಸ್ಯೆಯೂ ಉಂಟಾಗಿತ್ತು. ಕೂಡಲೇ ಅವರನ್ನು ಅಪೊಲೋ ಆಸ್ಪತ್ರೆಗೆ ಕರೆದೊಯ್ಯವ ವೇಳೆಗೆ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅವರು ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.
ಗಾಂಧಿ, ರಾಮಮನೋಹರ ಲೋಹಿಯಾ ಸಿದ್ಧಾಂತದ ಅಪ್ಪಟ ಸಮಾಜವಾದಿಯಾಗಿದ್ದ ಅವರು ಚಿತ್ರದುರ್ಗಕ್ಕೆ ಸೇರಿದ ಗುಡ್ಡದ ರಂಗಪ್ಪನಹಳ್ಳಿಯಲ್ಲಿ ಹುಟ್ಟಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಅಧ್ಯಯನ ಮಾಡಿದ್ದರು.
ಮಾನಸ ಗಂಗೋತ್ರಿಯಲ್ಲಿ ಪ್ರಪಥಮ ತಂಡದಲ್ಲಿ ಕನ್ನಡ ಎಂ.ಎ. ವ್ಯಾಸಂಗ ಮಾಡಿದರು. ಅವರ ಗುರುಗಳಾದ ಪ್ರೊ. ಡಿ.ಎಲ್. ನರಸಿಂಹಚಾರ್, ಪ್ರೊ. ತೀ.ನಂ. ಶ್ರೀಕಂಠಯ್ಯನವರನ್ನು ನೆನೆಯುತ್ತಿದ್ದರು.
ವಿದ್ಯಾರ್ಥಿ ದೆಸೆಯಲ್ಲೆ ಬರೆಯುವ ಹವ್ಯಾಸ ಬೆಳೆಸಿಕೊಂಡ ಮಲ್ಲೇಶ್ ಸಮಾಜವಾದಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೋರಾಟದ ಹಾದಿಯನ್ನು ತುಳಿದರು. ಎಪ್ಪತ್ತರ ದಶಕದಲ್ಲಿ ಕರ್ನಾಟಕದ ಪ್ರಗತಿಪರ ಸಂಘಟನೆಗಳಾದ ಬರಹಗಾರರ ಒಕ್ಕೂಟದ ಸಂಸ್ಥಾಪಕ ಕಾರ್ಯದರ್ಶಿ, ಕರ್ನಾಟಕ ವಿಚಾರವಾದಿ ಒಕ್ಕೂಟದ ಸ್ಥಾಪಕ ಅಧ್ಯಕ್ಷ, ಮೇಲುಕೋಟೆಯಲ್ಲಿರುವ ಜನಪದ ಸೇವಾ ಟ್ರಸ್ಟ್‌ಗೆ ಎರಡು ಬಾರಿ ಅಧ್ಯಕ್ಷ, ಒಮ್ಮೆ ಕಾರ್ಯದರ್ಶಿ ಯಾಗಿದ್ದರು.
ಜಯಪ್ರಕಾಶ್ ನಾರಾಯಣರ ಸಂಪೂರ್ಣ ಕ್ರಾಂತಿ ಆಂದೋಲನವನ್ನು ಕರ್ನಾಟಕದಲ್ಲಿ ಕೆಲವು ಸ್ನೇಹಿತರ ಜೊತೆ ಕಟ್ಟಿ ಸಂಘರ್ಷ ಸಮಿತಿಯ ಸಾರಥ್ಯ ವಹಿಸಿದ್ದರು. ಗೆಳೆಯ ಕೆ. ರಾಮದಾಸ್ ಜೊತೆಗೂಡಿ ಜಯಪ್ರಕಾಶ್ ನಾರಾಯಣರನ್ನು ಕರ್ನಾಟಕಕ್ಕೆ ಕರೆತಂದಿದ್ದರು.
ಕನ್ನಡನಾಡಿನ ನೆಲ, ಜಲ, ಭಾಷೆಯ ಬಗ್ಗೆ ತೀವ್ರ ಕಳಕಳಿ ಹೊಂದಿದ್ದ ಅವರು ಗೋಕಾಕ್ ಮತ್ತು ಕಾವೇರಿ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದರು. ಕೆಲ ವರ್ಷಗಳ ಹಿಂದೆ ‘ದ್ವೇಷ ಬಿಟ್ಟು-ದೇಶ ಕಟ್ಟು’ ರಾಜ್ಯಮಟ್ಟದ ಚಳುವಳಿಯನ್ನು ಒಂದು ತಿಂಗಳ ಕಾಲ ಸ್ನೇಹಿತರೊಂದಿಗೆ ಸೇರಿ ಕೋಮುವಾದದ ವಿರುದ್ಧ ಹೋರಾಡಿದ್ದರು.
ಮೈಸೂರು ಜಿಲ್ಲೆಯ ಚಾಮಲಾಪುರ ಉಷ್ಣಸ್ಥಾವರವನ್ನು ವಿರೋಧಿಸಿ ಹೋರಾಟ ಕಟ್ಟಿ ಅದಕ್ಕೆ ಶಾಶ್ವತ ತಡೆ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಸ್ನಾತಕೋತ್ತರ ಹಂತದವರೆಗೂ, ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲೂ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು ಎಂಬುದು ಅವರ ಪ್ರತಿಪಾದನೆಯಾಗಿತ್ತು.
ಗೋಕಾಕ್ ಚಳುವಳಿಯಲ್ಲಿ ಹುಟ್ಟಿಕೊಂಡು ಇಂದಿಗೂ ಕ್ರಿಯಾಶೀಲವಾಗಿ ಹೋರಾಡುತ್ತಿರುವ ಮೈಸೂರಿನ ‘ಕನ್ನಡ ಕ್ರಿಯಾ ಸಮಿತಿ’ಯ ಅಧ್ಯಕ್ಷರಾಗಿ, ಸಂಪೂರ್ಣ ಕನ್ನಡ ಮಾಧ್ಯಮದ ನೃಪತುಂಗ ಕನ್ನಡ ಶಾಲೆಯನ್ನು ಪ್ರಾರಂಭಿಸಿದ್ದರು.
1989ರ ಸಂಸತ್ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಅವರು 1,31,905 ಮತಗಳೊಂದಿಗೆ 3ನೇ ಸ್ಥಾನ ಗಳಿಸಿದ್ದರು. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಎದುರು ಸೋತಿದ್ದರು.