ಮನೆ ಕ್ರೀಡೆ ದಕ್ಷಿಣ ಆಫ್ರಿಕಾ ಪ್ರೀಮಿಯರ್ ಲೀಗ್: ಐಪಿಎಲ್‌ ಫ್ರ್ಯಾಂಚೈಸಿಗಳ ತೆಕ್ಕೆಗೆ 6 ತಂಡಗಳು

ದಕ್ಷಿಣ ಆಫ್ರಿಕಾ ಪ್ರೀಮಿಯರ್ ಲೀಗ್: ಐಪಿಎಲ್‌ ಫ್ರ್ಯಾಂಚೈಸಿಗಳ ತೆಕ್ಕೆಗೆ 6 ತಂಡಗಳು

0

ಬೆಂಗಳೂರು (Bengaluru): ದಕ್ಷಿಣ ಆಫ್ರಿಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಆಡಲಿರುವ ಆರು ತಂಡಗಳನ್ನೂ ಐಪಿಎಲ್‌ನ ಫ್ರ್ಯಾಂಚೈಸಿಗಳೇ ತಮ್ಮ ತೆಕ್ಕೆಗೆ ಹಾಕಿಕೊಂಡಿವೆ.
2023ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಟೂರ್ನಿ ನಡೆಯಲಿದೆ.
ಆರು ತಂಡಗಳನ್ನು ಪಡೆಯಲು 25 ಆಸಕ್ತರು ಅರ್ಜಿ ಸಲ್ಲಿಸಿದ್ದರು. ಈ ಪೈಪೋಟಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮಾಲೀಕತ್ವ ಹೊಂದಿರುವ ರಿಲಯನ್ಸ್‌ ಸಮೂಹವು ಕೇಪ್‌ ಟೌನ್ ತಂಡವನ್ನು ತನ್ನದಾಗಿಸಿಕೊಂಡಿತು. ಮುಂಬೈ ತಂಡವು ಐದು ಬಾರಿ ಐಪಿಎಲ್‌ ಪ್ರಶಸ್ತಿ ಜಯಿಸಿದೆ. ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ಕೂಡ ಜೊಹಾನ್ಸ್‌ಬರ್ಗ್ ತಂಡವನ್ನು ಸೆಳೆದುಕೊಂಡಿದೆ.
ಸನ್‌ರೈಸರ್ಸ್ ಹೈದರಾಬಾದ್ (ಸನ್‌ ಟಿ.ವಿ) ಫ್ರ್ಯಾಂಚೈಸಿಯು ಪೋರ್ಟ್ ಎಲಿಜಬೆತ್, ಲಖನೌ ಸೂಪರ್ ಜೈಂಟ್ಸ್‌ನ ಆರ್.ಪಿ. ಸಂಜೀವ್ ಗೊಯೆಂಕಾ ಅವರು ಡರ್ಬನ್, ರಾಜಸ್ಥಾನ ರಾಯಲ್ಸ್ ಫ್ರ್ಯಾಂಚೈಸಿಯು ಪಾರ್ಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಅವರು ಪ್ರಿಟೊರಿಯಾ ತಂಡವನ್ನು ಪಡೆದಿದ್ದಾರೆ.
ಈಗಾಗಲೇ ವೆಸ್ಟ್‌ ಇಂಡೀಸ್‌ನ ಕೆರೆಬಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿಯೂ ಐಪಿಎಲ್‌ ಫ್ರ್ಯಾಂಚೈಸ್‌ಗಳಾದ ಕೋಲ್ಕತ್ತಾ ನೈಟ್‌ರೈಡರ್ಸ್, ರಾಜಸ್ಥಾನ ರಾಯಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ಸಹ ಮಾಲೀಕತ್ವ ಹೊಂದಿವೆ.
ಈ ಟೂರ್ನಿಯ ಪ್ರವರ್ತಕರು ಕೂಡ ಭಾರತದವರೇ ಆದ ಸುಂದರ್ ರಾಮನ್ ಅವರು. ಈ ಹಿಂದೆ ಐಪಿಎಲ್‌ಗೆ ಮುಖ್ಯಸ್ಥರಾಗಿದ್ದರು.
ಈ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೆಮ್ ಸ್ಮಿತ್ ಅವರನ್ನು ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
ಐಪಿಎಲ್ ಫ್ರ್ಯಾಂಚೈಸಿಗಳು ಖರೀದಿಸಿದ ತಂಡಗಳು: ಮುಂಬೈ ಇಂಡಿಯನ್ಸ್ –ಕೇಪ್‌ಟೌನ್, ಚೆನ್ನೈ ಸೂಪರ್ ಕಿಂಗ್ಸ್ –ಜೋಹಾನ್ಸ್‌ಬರ್ಗ್, ಡೆಲ್ಲಿ ಕ್ಯಾಪಿಟಲ್ಸ್ –ಪ್ರಿಟೊರಿಯಾ, ಲಖನೌ ಸೂಪರ್‌ಜೈಂಟ್ಸ್ –ಡರ್ಬನ್, ರಾಜಸ್ಥಾನ ರಾಯಲ್ಸ್ –ಪಾರ್ಲ್
ಸನ್‌ರೈಸರ್ಸ್ ಹೈದರಾಬಾದ್ –ಪೋರ್ಟ್ ಎಲಿಜಬೆತ್.