ಮನೆ ರಾಜ್ಯ ಮುಂದಿನ ವಾರದೊಳಗೆ ಮೇಕೆದಾಟು ಅಂತಿಮ ತೀರ್ಪು ಪ್ರಕಟ ಸಾಧ್ಯತೆ: ಸಿಎಂ ಬೊಮ್ಮಾಯಿ

ಮುಂದಿನ ವಾರದೊಳಗೆ ಮೇಕೆದಾಟು ಅಂತಿಮ ತೀರ್ಪು ಪ್ರಕಟ ಸಾಧ್ಯತೆ: ಸಿಎಂ ಬೊಮ್ಮಾಯಿ

0

ಮಂಡ್ಯ (Mandya): ಮೇಕೆದಾಟು ಯೋಜನೆಯ ಅಂತಿಮ ತೀರ್ಪು ಮುಂದಿನ ವಾರದೊಳಗೆ ಹೊರಬೀಳುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸಿದ್ಧಪಡಿಸಿರುವ ಡಿಪಿಆರ್ ಗೆ ಅನುಮೋದನೆ ದೊರೆತ ಬಳಿಕ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಈ ಯೋಜನೆಯಿಂದ ಮಂಡ್ಯ ಹಾಗೂ ಬೆಂಗಳೂರು ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ಯೋಜನೆಗೆ ಚಾಲನೆ ನೀಡಲು ಬೇಕಾದ ಅನುಮತಿಗಳನ್ನು ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೈಸೂರು, ಮಂಡ್ಯ ಹಾಸನ ಭಾಗದ ರೈತರು , ಈ ನೀರಾವರಿ ಯೋಜನೆಗಳ ಸಮರ್ಪಕ ಬಳಕೆಯಿಂದ 15 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸಿದ್ದು, ಇದನ್ನು ವಿಸ್ತರಿಸಲಾಗುವುದು. ನಮ್ಮದು ರೈತರಿಗೆ ಸ್ಪಂದಿಸುವ ಸರ್ಕಾರ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ಸಮರ್ಪಣಾ ಭಾವನೆಯಿಂದ ನಾವು ಕೆಲಸ ಮಾಡಿದಾಗ ಜನ ನಮ್ಮನ್ನು ನೆನಪಿನಲ್ಲಿಡುತ್ತಾರೆ ಎಂದರು.
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳು ತುಂಬಿರುವ ಅಪರೂಪದ ವರ್ಷ ಇದಾಗಿದೆ. ನಾಡಿನಾದ್ಯಂತ ಉತ್ತಮ ಮಳೆಯಾಗಿದೆ. ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಈ ಸುಸಂದರ್ಭದಲ್ಲಿ ಬಾಗಿನ ಅರ್ಪಿಸಿರುವುದು ನನ್ನ ಸುಯೋಗ. ಕಾವೇರಿ ತಾಯಿ ರಾಜ್ಯದ ಜೀವನದಿ. ಒಂದು ನದಿ ಮನುಷ್ಯನ ಬೇಕುಬೇಡಗಳನ್ನು ಪೂರೈಸುವ ಜೊತೆಗೆ ಒಂದು ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ. ಇಂತಹ ಪವಿತ್ರವಾದ ಕಾವೇರಿ ನದಿಯ ಸದುಪಯೋಗ ಮಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಮೈಸೂರಿನ ಮಹಾರಾಜರು ಕನ್ನಂಬಾಡಿ ಕಟ್ಟೆಯನ್ನು ಕಟ್ಟುವಲ್ಲಿನ ಅವರ ಶ್ರಮ, ತ್ಯಾಗ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಈ ಸುದಿನದಂದು ನೆನೆಯಬೇಕಿದೆ ಎಂದರು.
ಕೆಆರ್ ಎಸ್‍ನ 61 ಕ್ರೆಸ್ಟ್ ಗೇಟ್‍ಗಳ ಬದಲಾವಣೆಗೆ ಕ್ರಮ:
ಕೆಆರ್ ಎಸ್ ಜಲಾಶಯವನ್ನು ಉತ್ತಮವಾಗಿ ನಿರ್ವಹಿಸಬೇಕಾಗಿದೆ. 2008 ರಲ್ಲಿ ನೀರಾವರಿ ಸಚಿವನಾಗಿದ್ದಾಗ ಕೆಆರ್ ಎಸ್ ಕ್ರೆಸ್ಟ್ ಗೇಟ್‍ನಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿರುವುದನ್ನು ತಡೆಗಟ್ಟಲು ಗೇಟ್‍ಗಳನ್ನು ಬದಲಿಸಲಾಯಿತು. ಜಲಾಶಯದ ಒಟ್ಟು 136 ಗೇಟ್‍ಗಳಲ್ಲಿ ಉಳಿದ 61 ಗೇಟ್‍ಗಳನ್ನು ಒಂದು ವರ್ಷದೊಳಗೆ ಬದಲಿಸಿ, ಪುನಃ ನಿರ್ಮಿಸಲು ಈಗಾಗಲೇ ಆದೇಶ ನೀಡಲಾಗಿದ್ದು,160 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಕ್ರೆಸ್ಟ್ ಗೇಟ್‍ಗಳ ಬದಲಾವಣೆಯ ಕಾಮಗಾರಿ ಸಂಪೂರ್ಣ ಮುಗಿದ ನಂತರ ಕೆಆರ್ ಎಸ್ ಜಲಾಶಯದ ವಿಜೃಂಭಣೆಯ ಆಚರಣೆಯನ್ನು ಮಾಡಲಾಗುವುದು. ಸರ್ಕಾರ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಹಿಂದಿನಿಂದಲೂ ಮಹರಾಜ ಆಣೆಕಟ್ಟುಗಳು ಹಾಗೂ ನಾಲೆಗಳಿದ್ದವು. ನೆಲಸಮವಾಗಿದ್ದ ನಾಲೆಗಳ ಸಂಪೂರ್ಣ ಆಧುನೀಕರಣ ಕೆಲಸ ಮಾಡಲಾಗಿತ್ತು. ಈ ಆಣೆಕಟ್ಟುಗಳಿಂದ 94 ಸಾವಿರ ಎಕರೆ ನೀರಾವರಿ ಸೌಲಭ್ಯ ಒದಗಿಸಲಾಗಿತ್ತು ಎಂದರು.
ಕೆಆರ್ ಎಸ್ ಉದ್ಯಾನವನ ಆಧುನೀಕರಣ :
ನೀರಿನ ಸದ್ಬಳಕೆ ಮಾಡಲು ಸೂಕ್ಷ್ಮ ನೀರಾವರಿಯನ್ನು ಪ್ರಾರಂಭಿಸಲಾಗಿದೆ. ಪುರಗಾಲಿ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಮರುಅಂದಾಜು ಮಾಡಿ ಕಾಮಗಾರಿ ಪ್ರಾರಂಭಿಸಲಾಗುವುದು. ಮೊರೆಕೊಪ್ಪಲಿನ ಕೃಷಿ ಭೂಮಿಯನ್ನು ಕೆಆರ್ ಡಿಬಿ ತೆಗೆದುಕೊಳ್ಳಬಾರದೆಂಬ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು. ವಿಶ್ವವಿಖ್ಯಾತ ಕೆಆರ್ ಎಸ್‍ನ ಉದ್ಯಾನವನದ ಆಧುನೀಕರಣ ಯೋಜನೆಗೆ ಅನುದಾನ ನೀಡಲಾಗುವುದು ಎಂದರು.
ವಿಶ್ವೇಶ್ವರಯ್ಯ ನಾಲೆಯ ನೀರು ರೈತರಿಗೆ ಒದಗಿಸಲಾಗುವುದು:
ವಿಶ್ವೇಶ್ವರಯ್ಯ ನಾಲೆಯ ಅಭಿವೃದ್ಧಿಗೆ 560 ಕೋಟಿ ರೂ. ಒದಗಿಸಿ ಬ್ರಾಂಚ್ ಕೆನಾಲ್‍ಗಳನ್ನು ನಿರ್ಮಿಸಲಾಗಿದೆ. ಮದ್ದೂರು ಬ್ರಾಂಚ್ ಕೆನಾಲ್, ಸಾಹುಕಾರ್ ಚೆನ್ನಯ್ಯ ಕೆನಾಲ್ ಸೇರಿದಂತೆ ಉಳಿದ ಬ್ರ್ಯಾಂಚ್ ಕೆನಾಲ್‍ಗಳಿಗೆ ನೀರು ಪೂರೈಸಲು ಸಾಧ್ಯವಾಗಿದೆ. ಈ ವರ್ಷದ ಯೋಜನೆಯಲ್ಲಿ ವಿಶ್ವೇಶ್ವರಯ್ಯ ನಾಲೆಯ ನೀರು ರೈತರಿಗೆ ಒದಗಿಸುವ ಕೆಲಸ ಕೈಗೊಳ್ಳಲಾಗುವುದು. ವಿಶ್ವೇಶ್ವರಯ್ಯ ನಾಲೆಯ ಅಂತಿಮ ಹಂತದ ಸಬ್ ಡಿಸ್ಟ್ರಿಬ್ಯೂಟರಿ ಲ್ಯಾಟರ್‍ಗಳನ್ನು ಪೂರ್ಣಗೊಳಿಸುವುದು, ಕಬಿನಿ ಹಾಗೂ ಹಾರಂಗಿ ಬ್ರ್ಯಾಂಚ್ ಕೆನಾಲ್ ಗಳ 300 ಕಿ.ಮೀ. ಗಳಷ್ಟು ಆಧುನೀಕರಣ ಕಾಮಗಾರಿಯನ್ನು ಈ ವರ್ಷವೇ ಕೈಗೆತ್ತಿಕೊಳ್ಳಲಾಗುವುದು. 480 ಕೋಟಿ ರೂ.ಗಳನ್ನು ಆಧುನೀಕರಣಕ್ಕಾಗಿ ಮೀಸಲಿರಿಸಿದೆ ಎಂದರು.

ಹಿಂದಿನ ಲೇಖನಆಗಸ್ಟ್ 12 ರಂದು ಗಾಳಿಪಟ-2 ಸಿನಿಮಾ ರಿಲೀಸ್
ಮುಂದಿನ ಲೇಖನದಕ್ಷಿಣ ಆಫ್ರಿಕಾ ಪ್ರೀಮಿಯರ್ ಲೀಗ್: ಐಪಿಎಲ್‌ ಫ್ರ್ಯಾಂಚೈಸಿಗಳ ತೆಕ್ಕೆಗೆ 6 ತಂಡಗಳು