ಮುಂಬೈ: ದಕ್ಷಿಣ ಭಾರತದ ಚಿತ್ರಗಳು ದೇಶಾದ್ಯಂತ ಅದರಲ್ಲೂ ಉತ್ತರ ಭಾರತದಲ್ಲಿ ಎಬ್ಬಿಸುತ್ತಿರುವ ಅಲೆಯನ್ನು ನೋಡಿ ತಮಗೆ ಅಚ್ಚರಿಯಾಗಿಲ್ಲ, ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಕರು ಯಾವತ್ತಿಗೂ ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದು, ಅವರು ಕಥೆ ಹೇಳುವ ರೀತಿಯೂ ಸೊಗಸಾಗಿರುತ್ತದೆ ಎಂದು ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2015ರಿಂದ 2017ರ ಮಧ್ಯೆ ರಾಜಮೌಳಿ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ಬಾಹುಬಲಿ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡು ದೊಡ್ಡ ಯಶಸ್ಸು ಕಂಡಿತ್ತು. ಇನ್ನು ದಕ್ಷಿಣ ಭಾರತೀಯ ಭಾಷೆಗಳಲ್ಲಿ ತೆರೆಕಂಡ ಮಾಸ್ಟರ್, ಪುಷ್ಪ, ಆರ್ ಆರ್ ಆರ್ ಹಾಗೂ ಇತ್ತೀಚೆಗಷ್ಟೆ ತೆರೆಕಂಡ ಕೆಜಿಎಫ್ ಚಾಪ್ಟರ್ -2 ದೇಶಾದ್ಯಂತ, ವಿದೇಶಗಳಲ್ಲಿಯೂ ಭಾರೀ ಸದ್ದು ಮಾಡಿ ಅಪಾರ ಗಳಿಕೆ ಕಂಡಿವೆ.
1980ರಲ್ಲಿ ತೆರೆ ಕಂಡಿದ್ದ ತೆಲುಗು ಚಿತ್ರ ವಂಶ ವೃಕ್ಷಮ್ ಮತ್ತು 1983ರಲ್ಲಿ ಮಣಿ ರತ್ನಂ ನಿರ್ದೇಶನದಲ್ಲಿ ತೆರೆಗೆ ಬಂದ ಕನ್ನಡ ಚಿತ್ರ ಪಲ್ಲವಿ ಅನು ಪಲ್ಲವಿ ಚಿತ್ರಗಳಲ್ಲಿ ನಟಿಸಿದ್ದ ಅನಿಲ್ ಕಪೂರ್ ಗೆ ದಕ್ಷಿಣ ಭಾರತದ ಚಿತ್ರಗಳೆಂದರೆ ಯಾವತ್ತಿಗೂ ಸ್ಪೂರ್ತಿಯಂತೆ.
ದಕ್ಷಿಣ ಭಾರತ ಚಿತ್ರರಂಗದವರು ಯಾವತ್ತಿಗೂ ಉತ್ತಮ ಚಿತ್ರಗಳನ್ನು ಮಾಡುತ್ತಾರೆ. ಜನ ಇಷ್ಟಪಟ್ಟು ನೋಡುತ್ತಾರೆ. ರಾಮ್ ಔರ್ ಶ್ಯಾಮ್ ನಿಂದ ಏಕ್ ತುಜೆ ಕೆ ಲಿಯೆ ಚಿತ್ರದವರೆಗೆ ದಕ್ಷಿಣದವರು ಅದ್ಬುತ ಚಿತ್ರಗಳನ್ನು ನಿರ್ಮಿಸಿದ್ದು ಅದು ಮುಂದುವರಿದುಕೊಂಡು ಹೋಗುತ್ತಿದೆ. ಅವರು ಯಾವತ್ತಿಗೂ ಪ್ರೇರಣೆ ಎನ್ನುತ್ತಾರೆ.
ನಾನು ನನ್ನ ಸಿನೆಮಾ ವೃತ್ತಿಯನ್ನು ಆರಂಭಿಸಿದ್ದು ದಕ್ಷಿಣ ಭಾರತ ಚಿತ್ರದ ಮೂಲಕ. ನಾನು ನಾಯಕನಾಗಿ ಮೊದಲು ಅಭಿನಯಿಸಿದ್ದು ತೆಲುಗು ಸಿನೆಮಾದಲ್ಲಿ. ಅಲ್ಲಿಂದ ನಾನು ವೃತ್ತಿಪರತೆ, ಶ್ರದ್ಧೆ, ಶಿಸ್ತನ್ನು ಕಲಿತೆ ಎನ್ನುತ್ತಾರೆ.
65 ವರ್ಷದ ನಟ ಅನಿಲ್ ಕಪೂರ್ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲದೆ ಹಮ್ ಆಪ್ಕೆ ದಿಲ್ ಮೇ ರೆಹ್ತೆ ಹೈ ಮತ್ತು ಹುಮಾರಾ ದಿಲ್ ಆಪ್ಕೆ ಪಾಸ್ ಹೈ ಸೇರಿದಂತೆ ಅವರ ಹಿಂದಿ ರೂಪಾಂತರಗಳಲ್ಲಿ ಸಹ ಶೀರ್ಷಿಕೆ ಮಾಡಿದ್ದಾರೆ. ದಕ್ಷಿಣ ಇಂಡಸ್ಟ್ರಿ ಯಾವಾಗಲೂ ಒಳ್ಳೆಯ ಕಥೆಗಳು, ಚಲನಚಿತ್ರಗಳನ್ನು ನೀಡಿದೆ. ಅದು ಮುಂದುವರಿದುಕೊಂಡು ಹೋಗುತ್ತದೆ. ದಕ್ಷಿಣ ಚಿತ್ರರಂಗದ ನಿರ್ದೇಶಕರನ್ನು ಉತ್ತಮ ದೃಷ್ಟಿಕೋನದಿಂದ ಎದುರು ನೋಡುತ್ತೇನೆ. ನನಗೆ ಯಾವಾಗಲೂ ಇಷ್ಟವಾಗುತ್ತಾರೆ, ಹಾಗಾಗಿ ಈ ಗೆಲುವು, ಯಶಸ್ಸು ನನಗೆ ಅಚ್ಚರಿ ಎನಿಸುವುದಿಲ್ಲ ಎನ್ನುತ್ತಾರೆ.
ಈ ಯಶಸ್ಸು ಆಗಬೇಕಿತ್ತು ಹೀಗೆಯೇ ಶಾಶ್ವತವಾಗಿ ಮುಂದುವರಿಯಲಿ ಎಂದು ಅನಿಲ್ ಕಪೂರ್ ತಮ್ಮ ಇತ್ತೀಚಿನ ನೆಟ್ಫ್ಲಿಕ್ಸ್ ಚಲನಚಿತ್ರ ಥಾರ್ನ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿದರು. ರಾಜ್ ಸಿಂಗ್ ಚೌಧರಿ ನಿರ್ದೇಶಿಸಿದ, ರಾಜಸ್ಥಾನ-ಸೆಟ್ ರಿವೆಂಜ್ ನಾಯ್ರ್ ಥ್ರಿಲ್ಲರ್ ನಲ್ಲಿ ಪೊಲೀಸ್ ಅಧಿಕಾರಿಯಾಗಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದು ಮೇ 6ರಂದು ಬಿಡುಗಡೆಯಾಗಲಿದೆ.