ಮನೆ ಸುದ್ದಿ ಜಾಲ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಸಚಿವ ಎಸ್.ಟಿ.ಸೋಮಶೇಖರ್ ಬಿರುಸಿನ ಪ್ರಚಾರ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಸಚಿವ ಎಸ್.ಟಿ.ಸೋಮಶೇಖರ್ ಬಿರುಸಿನ ಪ್ರಚಾರ

0

ಮೈಸೂರು (Mysuru)-ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ (S.T.Somshekar) ಅವರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಪದವೀಧರರು, ಶಿಕ್ಷಕರು, ಸಂಘ ಸಂಸ್ಥೆಗಳ ಪ್ರಮುಖರನ್ನು ಖುದ್ದು ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರವಾಗಿ ಮತಯಾಚನೆ ಮಾಡಿದರು.

ಕಳೆದ ಬಾರಿ ಕೂಡ ರವಿಶಂಕರ್ ಅವರಿಗೆ ಮತ ನೀಡಿದ್ದಿರಿ. ಆದರೆ ಮತಚಲಾವಣೆ ಕ್ರಮಬದ್ಧವಾಗಿ ಮಾಡದ ಹಿಲೆಯಲ್ಲಿ ಸಾಕಷ್ಟು ಮತಗಳು ತಿರಸ್ಕೃತಗೊಂಡು 186 ಮತಗಳಿಂದ ಸೋಲಬೇಕಾಯಿತು. ಆದರೆ ಈ ಬಾರಿ ಮೊದಲ ಪ್ರಾಶಸ್ತ್ಯ ಮತವನ್ನು ಕ್ರಮಬದ್ಧವಾಗಿ ಚಲಾಯಿಸುವ ಮೂಲಕ ರವಿಶಂಕರ್ ಅವರನ್ನು ಗೆಲ್ಲಿಸಬೇಕು ಎಂದರು.

ರವಿಶಂಕರ್ ಅವರು ಪದವೀಧರರು, ಶಿಕ್ಷಕರ ಬಗ್ಗೆ ಕಾಳಜಿ ಹೊಂದಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅದನ್ನು ಪರಿಹರಿಸಲಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸೋತರೂ, ಪದವೀಧರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಒಬ್ಬ ಸುಶಿಕ್ಷಿತ, ಅಪಾರ ಜ್ಞಾನ ಹೊಂದಿರುವ ಸರಳ, ಸಜ್ಜನಿಕೆ ವ್ಯಕ್ತಿಯಾಗಿರುವ ರವಿಶಂಕರ್ ಅವರನ್ನು ಗೆಲ್ಲಿಸಿ ಸರ್ಕಾರದ ಕೈ ಬಲಪಡಿಸಬೇಕು ಎಂದು ಹೇಳಿದರು.

ಎಲ್ಲಾ ಕಡೆ ಉತ್ತಮ ಸ್ಪಂದನೆ

ಪ್ರಚಾರ ಮಾಡಿದ ಕಡೆಯೆಲ್ಲಾ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರು ನೂರಕ್ಕೆ ನೂರರಷ್ಟು ಮೊದಲ ಪ್ರಾಶಸ್ತ್ಯ ಮತಗಳಿಂದ ಜಯಗಳಿಸಲಿದ್ದಾರೆ ಎಂದು ಸಚಿವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮದವರಿಗೆ ತಿಳಿಸಿದರು.

ಜೂ.8ಕ್ಕೆ ಮುಖ್ಯಮಂತ್ರಿಗಳು ಆಗಮಿಸಿ, ಪ್ರಚಾರ ಮಾಡಲಿದ್ದಾರೆ. 4 ಜಿಲ್ಲೆಗಳ ಎಲ್ಲಾ ಪ್ರಮುಖರೊಂದಿಗೆ ಮಾತುಕತೆ ನಡೆಸಲಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಇನ್ನು ಜೆಡಿಎಸ್ ಅಭ್ಯರ್ಥಿಯನ್ನು ಯಾರೂ ಬೆಂಬಲಿಸುತ್ತಿಲ್ಲ. ಎಲ್ಲಾ ಪದವೀಧರರು, ಶಿಕ್ಷಕರು ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದು, ರವಿಶಂಕರ್ ಗೆಲುವು ನಿಶ್ಚಿತ ಎಂದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಸಂಬಂಧ ಇಂದು ಮುಖ್ಯಮಂತ್ರಿಗಳು ಸಂಬಂಧಪಟ್ಟವರೊಂದಿಗೆ ಸಭೆ ಮಾಡಲಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿ ಮುಂದೆ ಇದು ಆಗದಂತೆ ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಶಿಕ್ಷಣ ಸಚಿವರಾದ ನಾಗೇಶ್ ಅವರ ಮನೆ ಮೇಲೆ ದಾಳಿ ಮಾಡಿದ್ದರ ಸಂಬಂಧ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಯೋಗ ದಿನಾಚರಣೆ ಕುರಿತು ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜೂ.8ಕ್ಕೆ ಮುಖ್ಯಮಂತ್ರಿಗಳು ಆಗಮಿಸಿದ ನಂತರ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದರು.