ಮುಂಬೈ : ಕಾಂಡ್ಲಾದಿಂದ ಮುಂಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಚಕ್ರ ಟೇಕಾಫ್ ಆಗುವಾಗ ಕಳಚಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಇಷ್ಟಾದರೂ ವಿಮಾನ ಮುಂಬೈಗೆ ಪ್ರಯಾಣಬೆಳೆಸಿ, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಸ್ಪೈಸ್‌ಜೆಟ್ Q400 ವಿಮಾನ 75 ಪ್ರಯಾಣಿಕರನ್ನು ಹೊತ್ತು ಇಂದು ಕಾಂಡ್ಲಾ ವಿಮಾನ ನಿಲ್ದಾಣದ ರನ್‌ವೇ 23 ರಿಂದ ಟೇಕಾಫ್ ಆಗಿತ್ತು. ಈ ವೇಳೆ ವಿಮಾನದಿಂದ ಕಪ್ಪು ಬಣ್ಣದ ದೊಡ್ಡ ವಸ್ತು ಬೀಳುತ್ತಿರುವುದು ಕಾಣಿಸಿತ್ತು. ಪರಿಶೀಲನೆ ನಡೆಸಿದಾಗ ಅದು ವಿಮಾನದ ಚಕ್ರ ಎಂದು ತಿಳಿದುಬಂದಿತ್ತು. ಸ್ಪೈಸ್ ಜೆಟ್ ಈ ಘಟನೆಯನ್ನು ದೃಢಪಡಿಸಿದೆ.
ವಿಮಾನವು ಮುಂಬೈ ತಲುಪುತ್ತಿದ್ದಂತೆ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ, ಲ್ಯಾಂಡ್ ಮಾಡಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.















