ಮನೆ ರಾಜ್ಯ ಜೆಡಿಎಸ್ ಅಭ್ಯರ್ಥಿಯಿಂದ ಸ್ವಯಂಪ್ರೇರಿತ ಅಪಹರಣ ಷಡ್ಯಂತ್ರ: ಯಲಹಂಕದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಜೆಡಿಎಸ್ ಅಭ್ಯರ್ಥಿಯಿಂದ ಸ್ವಯಂಪ್ರೇರಿತ ಅಪಹರಣ ಷಡ್ಯಂತ್ರ: ಯಲಹಂಕದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

0

ಬೆಂಗಳೂರು: ಯಲಹಂಕ ಜೆಡಿಎಸ್ ಅಭ್ಯರ್ಥಿ ಎಂ.ಮುನೇಗೌಡ ಚುನಾವಣೆ ವೇಳೆ ತಮ್ಮನ್ನು ತಾವೇ ಅಪಹರಿಸಿಕೊಂಡಂತೆ ನಾಟಕ ಮಾಡಿ ಅನುಕಂಪದ ಮೇಲೆ ಮತ ಪಡೆಯಲು ಸಂಚು ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಇಂದು ಯಲಹಂಕ, ರಾಜಾನುಕುಂಟೆ, ಮಾದನಾಯಕನಹಳ್ಳಿ ಸೇರಿದಂತೆ ಕ್ಷೇತ್ರದ ವಿವಿಧ ಪೊಲೀಸ್ ಠಾಣೆಗಳ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

Join Our Whatsapp Group

ಅಪಹರಣ ಮತ್ತು ಗಲಭೆ ರೂಪಿಸುವ ಸಂಚು ಹೂಡಿದ್ದ ವಿಡಿಯೋ ತುಣುಕುಗಳು ಮಾಧ್ಯಮಗಳಲ್ಲಿ ಬಿತ್ತರವಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಕ್ಷಣವೇ ಮುನೇಗೌಡ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಚುನಾವಣೆಗೆ ಎರಡು –ಮೂರು ದಿನ ಬಾಕಿ ಇರುವಂತೆಯೇ ತಮ್ಮ ಹುಡುಗರಿಂದ ತಾವೇ ಸ್ವತಃ ಅಪಹರಣಕ್ಕೆ ಒಳಗಾಗುವುದು, ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರ ಹುಟ್ಟೂರು ಸಿಂಗನಾಯಕನಹಳ್ಳಿಯಲ್ಲಿ ಜೆಡಿಎಸ್ ಪ್ರಚಾರದ ವೇಳೆ ಮುನೇಗೌಡ ಅವರ ಪತ್ನಿ ಮತ್ತು ಭಾವಮೈದುನನ ಮೇಲೆ ಜೆಡಿಎಸ್ ಕಾರ್ಯಕರ್ತರಿಂದಲೇ ಹಲ್ಲೆ ನಡೆಸಿ ಅದರ ಆರೋಪವನ್ನು ವಿಶ್ವನಾಥ್ ಅವರ ಮೇಲೆ ಹಾಕಿ ಅವರ ವಿರುದ್ಧ ದೂರು ದಾಖಲಿಸುವುದು, ಅಪಹರಣ ಪ್ರಹಸನವಾಗುತ್ತಿದ್ದಂತೆ ಇಡೀ ಯಲಹಂಕವನ್ನು ಬಂದ್ ಮಾಡಿಸಿ ಗಲಭೆ ಸೃಷ್ಟಿಸಿ ಕಾನೂನಿಗೆ ಭಂಗವನ್ನುಂಟು ಮಾಡುವುದು, ಮಹಿಳೆಯೊಬ್ಬಳನ್ನು ಪತ್ರಕರ್ತೆಯ ಸೋಗಿನಲ್ಲಿ ಕಳುಹಿಸಿ ಸಂದರ್ಶನದ ನೆಪದಲ್ಲಿ ವಿಶ್ವನಾಥ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಸೇರಿದಂತೆ ಹಲವು ವಿಧದಲ್ಲಿ ವಿಶ್ವನಾಥ್ ವಿರುದ್ಧ ಷಡ್ಯಂತ್ರ ರೂಪಿಸುವ ಸುಮಾರು 25 ನಿಮಿಷಗಳ ವಿಡಿಯೋ ಬಹಿರಂಗವಾಗಿದೆ.

ಇದರ ವಿರುದ್ಧ ಪ್ರತಿಭಟನೆ ನಡೆಸಿ ರಾಜಾನುಕುಂಟೆ ಪೊಲೀಸರು ಮತ್ತು ಚುನಾವಣೆ ಆಯೋಗಕ್ಕೆ ದೂರು ನೀಡಿದ ವಿಶ್ವನಾಥ್ ಅವರು, ನೇರವಾಗಿ ರಾಜಕೀಯ ಮಾಡದೇ ಕಾನೂನು ಸುವ್ಯವಸ್ಥೆಗೆ ಭಂಗ ತಂದು ನನ್ನ ಮೇಲೆಯೂ ಆರೋಪಗಳು ಬರುವಂತೆ ಮಾಡುವ ವಿಚ್ಛಿದ್ರಕಾರಿ ಷಡ್ಯಂತ್ರವನ್ನು ಜೆಡಿಎಸ್ ಅಭ್ಯರ್ಥಿ ರೂಪಿಸಿದ್ದರು ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕುಕೃತ್ಯಕ್ಕೆ ಕೈ ಹಾಕಿದ್ದಾರೆ. ಅನುಕಂಪ ಗಿಟ್ಟಿಸಲು ತನ್ನ ಪತ್ನಿಯ ಮೇಲೆಯೇ ತಮ್ಮ ಹುಡುಗರ ಮೂಲಕ ಹಲ್ಲೆ ನಡೆಸುವಂತಹ ಹೀನಕೃತ್ಯಕ್ಕೆ ಮುಂದಾಗಿರುವ ಮುನೇಗೌಡ ಅವರದ್ದು ಎಂತಹ ನೀಚ ಮನಸು ಎಂಬುದನ್ನು ಸಾಬೀತುಪಡಿಸಿದೆ. ಇಂತಹ ಹೀನ ವ್ಯಕ್ತಿತ್ವದ ವ್ಯಕ್ತಿ ಜನಪ್ರತಿನಿಧಿಯಾದರೆ ಇಡೀ ಯಲಹಂಕದ ಜನರ ಶಾಂತಿ ನೆಮ್ಮದಿ ಹಾಳಾಗಲಿದೆ ಎಂದರು.

ನೇರಾನೇರ ಚುನಾವಣೆಯನ್ನು ಎದುರಿಸಲಿ. ಅವರು ತಮ್ಮ ಪಕ್ಷ ಮತ್ತು ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಏನು ಎಂಬುದನ್ನು ಜನತೆಯ ಮುಂದಿಟ್ಟು ಮತ ಕೇಳಲಿ. ಅದನ್ನು ಬಿಟ್ಟು ಈ ರೀತಿ ಕೀಳುಮಟ್ಟದಲ್ಲಿ ರಾಜಕೀಯ ಮಾಡಲು ಹೊರಟರೆ ಯಲಹಂಕದ ಬುದ್ಧಿವಂತ ಮತದಾರರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಹೀಗೆ ಷಡ್ಯಂತ್ರ ರೂಪಿಸಿರುವ ವ್ಯಕ್ತಿ ಮತ್ತು ಇದರ ಹಿಂದೆ ಇರುವ ಕಾಣದ ಕೈಗಳ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಪೊಲೀಸರಲ್ಲಿ ಮನವಿ ಮಾಡಿರುವುದಾಗಿ ವಿಶ್ವನಾಥ್ ತಿಳಿಸಿದರು.

ಹಿಂದಿನ ಲೇಖನಜಾಮೀನು ಕೋರಿದ ಪ್ರಕರಣಗಳಲ್ಲಿ ತಡ ಮಾಡದೆ ಆದೇಶ ಮಾಡಬೇಕು; ವಿಸ್ತೃತ ಜಾಮೀನು ಆದೇಶಕ್ಕೆ ತಡೆ ಒಡ್ಡಬೇಕು: ಸುಪ್ರೀಂ
ಮುಂದಿನ ಲೇಖನಬಿಲ್ಕಿಸ್ ಬಾನು ಪ್ರಕರಣ: ಈ ಪೀಠದಿಂದ ತಪ್ಪಿಸಿಕೊಳ್ಳಲು ಅಪರಾಧಿಗಳಿಂದ ಸ್ಪಷ್ಟ ಪ್ರಯತ್ನ ನಡೆದಿದೆ ಎಂದ ಸುಪ್ರೀಂ