ಮೈಸೂರು: ಕ್ರೀಡೆ ಹಾಗೂ ಸಾಂಸ್ಕತಿಕ ಚಟುವಟಿಕೆಗಳು ಶಿಕ್ಷಣದ ಅವಿಭಾಜ್ಯ ಅಂಗವೆಂದು ಪರಿಗಣಿಸಿ ಶಿಕ್ಷಣ ಸಂಸ್ಥೆಗಳು ವಾರ್ಷಿಕ ಯೋಜನೆ ರೂಪಿಸಬೇಕೆಂದು ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು.
ಅವರು ಮೈಸೂರಿನ ಆರ್. ಟಿ. ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಕ್ಯಾಂಪಸ್’ನಲ್ಲಿ ಹೊಸದಾಗಿ ನಿರ್ಮಿಸಿರುವ ಈಜುಕೊಳವನ್ನು ಉದ್ಘಾಟಿಸಿ ಮಾತನಾಡಿದರು.
ಮಗುವಿನ ಆಸಕ್ತಿ ವಲಯ ಹಾಗೂ ಪ್ರತಿಭೆಯನ್ನು ಆಧರಿಸಿ ಶಿಕ್ಷಣ ನೀಡುವುದೇ ನೈಜ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿಯೂ ಇದನ್ನೇ ಹೇಳುತ್ತದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ರವೀಂದ್ರನಾಥ ಟ್ಯಾಗೂರ್ ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಆರಂಭಿಸಲಾಗಿರುವ ಶಿಕ್ಷಣ ತಜ್ಞ ಆರ್. ರಘುರವರ ಸಾರಥ್ಯದ ನೈಪುಣ್ಯ ಶಾಲೆ ಮಾದರಿ ಎನ್ನುವ ರೀತಿಯಲ್ಲಿ ಶಿಕ್ಷಣ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವುದರ ದ್ಯೋತಕವಾಗಿ ಅತ್ಯಂತ ಸುಸಜ್ಜಿತ ಈಜುಕೊಳ ನಿರ್ಮಿಸಿ ಮಕ್ಕಳ ಕ್ರೀಡಾಸಕ್ತಿಯನ್ನು ಉತ್ತೇಜಿಸುತ್ತಿರುವುದು ಮೆಚ್ಚುಗೆಯ ಅಂಶವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರ್. ರಘು ಮಾತನಾಡಿ ಪ್ರತಿ ಮಗುವೂ ಈಜುವುದನ್ನು ಕಲಿಯುವುದರಿಂದ ಆ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಈಜು ಕಲಿಯಲೇ ಬೇಕಾದ ಒಂದು ಅಗತ್ಯದ ಕ್ರೀಡೆಯಾಗಿದ್ದು ಅಭಿವೃದ್ಧಿ ಹೊಂದುತ್ತಿರುವ ಆರ್. ಟಿ. ನಗರ ಹಾಗೂ ಸುತ್ತಮುತ್ತಲಿನ ಜನರಿಗೂ ಅನುಕೂಲವಾಗುವಂತೆ ಶಾಲಾ ವೇಳೆ ಹೊರತು ಪಡಿಸಿ ಇತರ ಸಮಯಗಳಲ್ಲಿ ಹೊರಗಿನ ಈಜು ಆಸಕ್ತರಿಗೂ ನೈಪುಣ್ಯ ಶಾಲೆಯ ಈಜುಕೊಳದಲ್ಲಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅರ್ಥಿಕ ಸಲಹೆಗಾರ ಬಿ.ಎಸ್. ನಾರಾಯಣಗೌಡ, ಕಾರ್ಯದರ್ಶಿ ಆರ್. ಕೌಟಿಲ್ಯ, ಸಮಾಜಸೇವಕ ಕೇಬಲ್ ಮಹೇಶ್, ಪ್ರಾಂಶುಪಾಲೆ ಶ್ರೀಮತಿ ಶಿಲ್ಪಾ ಪ್ರಶಾಂತ್ ಹಾಗೂ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.