ಮನೆ ಸುದ್ದಿ ಜಾಲ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

0


ಸತ್ಯ ಮಾರ್ಗದಲ್ಲಿ ಸಾಗಿದಾಗ ಸದೃಢ ರಾಷ್ಟ್ರ ಕಟ್ಟಲು ಸಾಧ್ಯ : ಚಂದ್ರಭೂಪಾಲ

ಶಿವಮೊಗ್ಗ: ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ ಸಾಗಿದಾಗ ಮಾತ್ರ ಸದೃಢ ರಾಷ್ಟ್ರ ಕಟ್ಟಲು ಸಾಧ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಅವರು ಪ್ರತಿಪಾದಿಸಿದ್ದರು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ ಸಿ ಎಸ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನುಉದ್ಘಾಟಿಸಿ ಮಾತನಾಡಿದರು. ಶ್ರೀ ರೇಣುಕಾಚಾರ್ಯರು, ಬಸವಾದಿ ಶರಣರು ನೀಡಿದ ತತ್ವಗಳ ಆಧಾರದಲ್ಲಿ ಸಮಾಜವನ್ನು ಸುಂದರವಾಗಿ ಕಟ್ಟಬಹುದು. ಈ ಸಮಾಜ ಕೂಡ ಆಚಾರ್ಯರ ತತ್ವಗಳ ಆಧಾರದ ಮೇಲೆ ಉತ್ತಮ ಸಮಾಜ ಕಟ್ಟಿದೆ. ಅವರು ನೀಡಿದ ಅಂಶಗಳನ್ನು ಅನುಸರಿಸುವ ಮೂಲಕ ಅಭಿವೃದ್ದಿ ಸಾಧ್ಯವಾಗುತ್ತದೆ. ಶ್ರೀ ರೇಣುಕಾಚಾರ್ಯರು ಸೇರಿದಂತೆ ನಮ್ಮ ಸಮಾಜದ ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ.

ಎಲ್ಲರೂ ಸಮಾನರಾಗಿ ಪರಿಪೂರ್ಣರಾಗಿ ಬದುಕಿದಾಗಲೇ ದೇಶ ಕಲ್ಯಾಣವಾಗುತ್ತದೆ. ಸತ್ಯದ ಮಾರ್ಗದಲ್ಲಿ ಸಾಗಬೇಕೆಂದು ಪ್ರತಿಪಾದಿಸಿದ ಆಚಾರ್ಯರು ಮನೆ ಮನೆಗೆ ಹೋಗಿ ಭಿಕ್ಷಾಟಣೆ ಮಾಡಿ ಧಾರ್ಮಿಕ ಚಿಂತನೆಯನ್ನು ಬಿತ್ತುತ್ತಿದ್ದರು. ಇಂತಹ ಮಹನೀಯರ ಆದರ್ಶ, ಸಿದ್ದಾಂತ, ತತ್ವಗಳನ್ನು ಮೈಗೂಡಿಸಿಕೊಂಡು ನಡೆಯೋಣವೆಂದು ತಿಳಿಸಿದರು. ಬಸವೇಶ್ವರ ವಿದ್ಯಾ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಾದ ಗುರುಸಿದ್ದ ಶಾಸ್ತ್ರಿ ಬಿ ಟಿ ಎಂ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶ್ರೀ ರೇಣುಕಾಚಾರ್ಯರ ಉದಯ ಸ್ಪೂರ್ತಿದಾಯಕವಾಗಿದೆ. ಶ್ರೀಗಳ ಬಗ್ಗೆ ನಾವು ಹೆಚ್ಚೆಚ್ಚು ತಿಳಿಯಬೇಕು. ಜಗದ್ಗುರು ರೇಣುಕಾಚಾರ್ಯ ಮತ್ತು ಪಂಚಾಚಾರ್ಯರನ್ನು ನೆನೆಸಿದರೆ ನಮ್ಮಲ್ಲಿರುವ ಪಾಪ ನಾಶವಾಗುತ್ತದೆ.

ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ವೇದಮೂರ್ತಿ ಚಂದ್ರಯ್ಯ ಮಾತನಾಡಿ, ಆಚಾರ್ಯರು, ಶರಣಾದಿ ಬಸವರು ಜಾತಿ, ಮತಗಳನ್ನು ನೋಡಲಿಲ್ಲ. ಜಂಗಮ ಎಂದರೆ ಚರ. ಅನ್ನವನ್ನು ಭಿಕ್ಷೆ ಬೇಡಿ ತಂದು ಹಿಂದುಳಿದವರಿಗೆ ಅನ್ನವನ್ನು ನೀಡುತ್ತಾ, ಜೊತೆಗೆ ಜ್ಞಾನ ದಾಸೋಹ ಮಾಡಿದವರು ವೀರಶೈವ ಜಂಗಮ ಪೀಳಿಗೆ. ಧರ್ಮ ಪ್ರಚಾರ ಹಾಗೂ ಮಾನವನನ್ನು ದೇವನನ್ನಾಗಿ ಮಾಡುವುದು ಆಚಾರ್ಯರ ಉದ್ದೇಶವಾಗಿತ್ತು. ಲಿಂಗಾರಾಧನೆಯಿಂದ ದೇಹದ ಶುಚಿತ್ವದ ಜೊತೆಗೆ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಲಿಂಗ ಪೂಜೆ ಮಾಡಬೇಕೆಂದು ತಿಳಿಸಿದರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಹರನಹಳ್ಳಿಯ ಶ್ರೀ ರಾಮಲಿಂಗೇಶ್ವರ ಮಠದ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ವೇದಮೂರ್ತಿ ಲೋಕೇಶ್ ಹೆಚ್.ಎಂ, ಜಿಲ್ಲಾ ಬೇಡ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ ಆರ್ ಸೋಮನಾಥ್, ಎಸಿ ಕಚೇರಿಯ ತಹಶೀಲ್ದಾರ್ ಎಂ.ಲಿಂಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.