ಕೊಲಂಬೊ (Colombo): ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶಕ್ಕೆ ಮಣಿದಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ, ಬುಧವಾರ ಮುಂಜಾನೆ ದೇಶ ಬಿಟ್ಟು ಮಾಲ್ಡೀವ್ಸ್‌ಗೆ ಪರಾರಿಯಾಗಿದ್ದಾರೆ.
ರಾಜಪಕ್ಸ ಅವರು ಪತ್ನಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಲಂಕಾ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ನ ರಾಜಧಾನಿ ಮಾಲೆಗೆ ಹೊರಟಿದ್ದಾರೆ ಎಂದು ಏಜೆನ್ಸಿಗಳು ವರದಿ ಮಾಡಿವೆ. ರಾಜಪಕ್ಸ ದೇಶವನ್ನು ತೊರೆದಿರುವುದನ್ನು ಸರ್ಕಾರಿ ಮೂಲಗಳು ಖಚಿತಪಡಿಸಿವೆ. ಆದರೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ಶನಿವಾರ, ಸಾವಿರಾರು ಪ್ರತಿಭಟನಾಕಾರರು ಪ್ರಧಾನಿಯವರ ಅಧಿಕೃತ ನಿವಾಸಗಳಿಗೆ ಮುತ್ತಿಗೆ ಹಾಕಿದ್ದರು.ಜನರ ಆಕ್ರೋಶಕ್ಕೆ ಕೊನೆಗೂ ಮಣಿದಿರುವ ರಾಜಪಕ್ಸ, ಜುಲೈ 13ರಂದು ರಾಜೀನಾಮೆ ನೀಡಲಿದ್ದಾರೆ ಎಂದು ಸ್ಪೀಕರ್ ಮಹಿಂದಾ ಯಪಾ ಅಬೆವರ್ಧನ ತಿಳಿಸಿದ್ದರು.ಶ್ರೀಲಂಕಾದ ಸಂಸತ್, ಜುಲೈ 20ರಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ. ಈ ನಡುವೆ ರಾಜಪಕ್ಸ ದೇಶ ಬಿಟ್ಟು ಪರಾರಿಯಾಗಿದ್ದಾರೆ.