ಬೆಂಗಳೂರು: ದೇಶದ ಗಮನ ಸೆಳೆದಿರುವ ಬಹುಕೋಟಿ ಬಿಟ್ಕಾಯಿನ್ ಹಗರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಹಲವು ಎಫ್ ಐ ಆರ್ ಹಾಗೂ ಚಾರ್ಜ್ ಶೀಟ್ ಗಳು ದಾಖಲಾಗಿದ್ದರೂ, ಆತ ತನ್ನ ಹ್ಯಾಕಿಂಗ್ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ ಎಂಬ ಮಾಹಿತಿ ಜಾರಿ ನಿರ್ದೇಶನಾಲಯ (ED) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವೆಬ್ ಸೈಟ್ ಹ್ಯಾಕಿಂಗ್, ಕ್ರಿಪ್ಟೊ ಆಸ್ತಿಗಳ ಕಳವು, ವಂಚನೆ, ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಶ್ರೀಕಿ ಭಾಗಿಯಾಗಿದ್ದಾನೆ ಎಂದು ಇಡಿ ತನಿಖೆ ತಿಳಿಸಿದೆ.

ವಾಟ್ಸ್ಆಪ್ ಚಾಟ್ ನಲ್ಲಿ ಸಿಕ್ಕ ಮಹತ್ವದ ಸುಳಿವು
ಶ್ರೀಕಿಯ ಆಪ್ತ ಸಹಚರ ಹಾಗೂ ಕ್ರಿಪ್ಟೊ ವ್ಯಾಪಾರಿ ರಾಬಿನ್ ಖಂಡೇಲ್ವಾಲ್ ಅವರೊಂದಿಗೆ ನಡೆದ ವಾಟ್ಸ್ಆಪ್ ಸಂಭಾಷಣೆಗಳ ಪರಿಶೀಲನೆ ವೇಳೆ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ.
ವಿದೇಶಿ ಸಂಸ್ಥೆಗಳಿಂದ e-SIM ಗಳನ್ನು ಖರೀದಿಸಿರುವುದು ಹಾಗೂ ಪ್ರೋಟಾನ್ VPN ಸೇರಿದಂತೆ ಹಲವು ಸಾಫ್ಟ್ ವೇರ್ ಸೇವೆಗಳ ಚಂದಾದಾರಿಕೆಯನ್ನು ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಇಡಿ ಬಂಧನದ ವೇಳೆ ಶ್ರೀಕಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಪರಿಶೀಲನೆಯಿಂದ ಈ ಮಾಹಿತಿಗಳು ದೊರೆತಿವೆ.
ವಾಟ್ಸ್ಆಪ್ ಚಾಟ್ ಪ್ರಕಾರ, ಈ ಸೇವೆಗಳನ್ನು ಶ್ರೀಕಿಯ ಪರವಾಗಿ ರಾಬಿನ್ ಖಂಡೇಲ್ವಾಲ್ ಖರೀದಿಸಿದ್ದಾನೆ ಎನ್ನಲಾಗಿದೆ. ಆದರೆ ಈ ಸೇವೆಗಳಿಗಾಗಿ ವಿದೇಶಿ ಸಂಸ್ಥೆಗಳಿಗೆ ಹಣವನ್ನು ಹೇಗೆ ಪಾವತಿಸಲಾಯಿತು ಮತ್ತು ಅದರ ಉದ್ದೇಶವೇನು ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಇಬ್ಬರೂ ಇಡಿ ಮುಂದೆ ಪರಸ್ಪರ ವಿರುದ್ಧ ಹೇಳಿಕೆ ನೀಡಿದ್ದಾರೆ.

ವಿದೇಶಿ ಕ್ರಿಪ್ಟೊ ವೇದಿಕೆಗಳ ಬಳಕೆ ಆರೋಪ
ತನಿಖೆಯಲ್ಲಿ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದ್ದು, ಶ್ರೀಕಿ ಅಮೆಜಾನ್ ವೆಬ್ ಸರ್ವೀಸಸ್ (AWS) ಕ್ಲೌಡ್ ಸರ್ವರ್ ಗಳನ್ನು ಬಳಸುತ್ತಿದ್ದನೆಂದು ಇಡಿ ತಿಳಿಸಿದೆ. ಹ್ಯಾಕಿಂಗ್ ಮೂಲಕ ಕಳವು ಮಾಡಲಾದ ಕ್ರಿಪ್ಟೊ ಆಸ್ತಿಗಳನ್ನು ವಿದೇಶಿ ಕ್ರಿಪ್ಟೊ ವಿನಿಮಯ ವೇದಿಕೆಗಳ ಮೂಲಕ ಮಾರಾಟ ಮಾಡಿ ಅಕ್ರಮ ಆದಾಯವನ್ನು ಮರೆಮಾಚುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಲಾಗಿದೆ.













