ಲಖನೌ (Lucknow)- ಶ್ರೀಕೃಷ್ಣ ಜನ್ಮಭೂಮಿ ಇರುವ ಸಂಪೂರ್ಣ ಜಾಗದ ಮಾಲೀಕತ್ವದ ಹಕ್ಕು ನೀಡುವುದು ಮತ್ತು ಅದರ ಪಕ್ಕದ ಶಾಹಿ ಈದ್ಗಾ ಮಸೀದಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ನಾಲ್ಕು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಗುರುವಾರ ಮಥುರಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಈ ಪ್ರಕರಣದ ಅರ್ಜಿಗಳನ್ನು ನಿತ್ಯ ವಿಚಾರಣೆ ನಡೆಸಿ ತ್ವರಿತವಾಗಿ ವಿಲೇವಾರಿ ಮಾಡುವಂತೆ ಹಿಂದೂ ಸಂಘಟನೆಯ ನಾಯಕರೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ, ಹೈಕೋರ್ಟ್ ಈ ಆದೇಶ ನೀಡಿದೆ.
ನ್ಯಾಯಮೂರ್ತಿ ಸಲೀಲ್ ಕುಮಾರ್ ರೈ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಬೇಕು. ಈ ವಿಷಯದಲ್ಲಿ ಎಲ್ಲಾ ಕಕ್ಷಿದಾರರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಿವಾದದಲ್ಲಿ ಪ್ರತಿವಾದಿಯಾಗಿರುವ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ವಿಚಾರಣೆಗೆ ಗೈರು ಹಾಜರಾದರೂ ಆದೇಶವನ್ನು ಹೊರಡಿಸಬೇಕು ಎಂದು ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತು.
ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಸಂಕೀರ್ಣದ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದಂತೆ ಮಥುರಾ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಸ್ತುತ ಒಂಬತ್ತು ಅರ್ಜಿಗಳು ಬಾಕಿ ಉಳಿದಿವೆ. ಈ ಎಲ್ಲಾ ಅರ್ಜಿಗಳನ್ನು ಹಿಂದೂ ಸಮುದಾಯದವರು, ಸಂಘಟನೆಗಳು ಸಲ್ಲಿಸಿವೆ. ಈ ಪೈಕಿ ಒಂದು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಮೇ 19 ಪ್ರಕಟಿಸಲು ಮಥುರಾ ನ್ಯಾಯಾಲಯ ನಿರ್ಧರಿಸಿದೆ.