ಶ್ರೀರಂಗಪಟ್ಟಣ(Shreerangapataana): ವಿಶ್ವ ಹಿಂದೂ ಪರಿಷತ್, ಭಜರಂಗ ಕಾರ್ಯಕರ್ತರು ಇಂದು ‘ಶ್ರೀರಂಗಪಟ್ಟಣ ಚಲೋ’ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಪೊಲೀಸ್ ಸರ್ಪಗಾವಲು ವಹಿಸಲಾಗಿದೆ.
ಹಿಂದೂ ಸಂಘಟನೆಗಳು ಪಟ್ಟಣದಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯದ ಮೂಲ ಸ್ಥಾನ ಎನ್ನಲಾದ ಟಿಪ್ಪು ಮಸೀದಿ (ಜಾಮಿಯಾ ಮಸೀದಿ)ಗೆ ಜಾಥಾ ಹಮ್ಮಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಸೀದಿಯತ್ತ ಯಾರೂ ಸುಳಿಯದಂತೆ ಕಬ್ಬಿಣದ ತಾತ್ಕಾಲಿಕ ಬೇಲಿ ನಿರ್ಮಿಸಲಾಗಿದೆ, ಡ್ರೋನ್ ಕ್ಯಾಮೆರಾ ಮೂಲಕ ಕಣ್ಗಾವಲು ಇರಿಸಲಾಗಿದೆ.
ಮಸೀದಿಯ ಸುತ್ತ 600 ಮೀಟರ್ ಕಬ್ಬಿಣದ ಬೇಲಿ ಎದ್ದಿದೆ. ಪೂರ್ವ ಕೋಟೆ ದ್ವಾರದಿಂದ ಮಸೀದಿಯತ್ತ ಬಂದು ಹೋಗುವವರ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ಡ್ರೋನ್ ಕ್ಯಾಮೆರಾದ ಕಣ್ಗಾವಲು ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಪಟ್ಟಣಕ್ಕೆ ವಿವಿಧೆಡೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ಮಸೀದಿಯ ಭದ್ರತೆಗೆ ಡಿಎಆರ್ ಮತ್ತು ಕೆಎಸ್‌ಆರ್‌ಪಿ ತುಕಡಿಗಳ ಕೂಡ ನಿಯೋಜನೆಗೊಂಡಿವೆ. ಶುಕ್ರವಾರ ಸಂಜೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಸೀದಿಯಲ್ಲಿ ನಡೆಯುತ್ತಿರುವ ಮದರಸಾ ತೆರವು ಮತ್ತು ಹಿಂದೂ ದೇವರ ಮೂರ್ತಿಗಳಿಗೆ ಪೂಜೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ವಿಎಚ್‌ಪಿ, ಭಜರಂಗದಳ ಸಂಘಟನೆಗಳ ಕಾರ್ಯಕರ್ತರು ಕೋರಿದ್ದಾರೆ. ಪಟ್ಟಣದ ಕುವೆಂಪು ವೃತ್ತದಿಂದ ಮೂಡಲಬಾಗಿಲು ಆಂಜನೇಯಸ್ವಾಮಿಯ ಮೂಲಸ್ಥಾನದವರೆಗೆ ಜಾಥಾ ನಡೆಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಜಾಥಾ ನಡೆಯುವ ದಾರಿಯ ಉದ್ದಕ್ಕೂ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.