ಮನೆ ಸುದ್ದಿ ಜಾಲ ವಿಧಾನಪರಿಷತ್ ಚುನಾವಣೆ: ಮೈ.ವಿ.ರವಿಶಂಕರ್ ಪರ ಸಚಿವ ಎಸ್.ಟಿ.ಸೋಮಶೇಖರ್ ಪ್ರಚಾರ

ವಿಧಾನಪರಿಷತ್ ಚುನಾವಣೆ: ಮೈ.ವಿ.ರವಿಶಂಕರ್ ಪರ ಸಚಿವ ಎಸ್.ಟಿ.ಸೋಮಶೇಖರ್ ಪ್ರಚಾರ

0

ಮೈಸೂರು (Mysuru)-ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಿರುವ ಮೈ.ವಿ.ರವಿಶಂಕರ್ ಪರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ನಗರದ ನಾನಾ ಭಾಗಗಳಲ್ಲಿ ಪದವೀಧರರು, ಶಿಕ್ಷಕರು ಸೇರಿದಂತೆ ನಾನಾ ಮುಖಂಡರನ್ನು ಭೇಟಿ ಮಾಡಿದ ಸಚಿವರು, ಚಿಂತಕರ ಚಾವಡಿ ಎಂದೇ ಕರೆಯಲ್ಪಡುವ ವಿಧಾನಪರಿಷತ್ ಗೆ ಅಪಾರ ಜ್ಞಾನ‌ಹೊಂದಿರುವ ಸುಶಿಕ್ಷಿತ ಮೈ.ವಿ.ರವಿಶಂಕರ್ ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂದು ಮನವಿ ಮಾಡಿದರು.
ಪದವೀಧರರು, ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮೈ.ವಿ.ರವಿಶಂಕರ್ ಮಾಡಲಿದ್ದಾರೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ಸೋತ ಬಳಿಕ ಜನರ ಬಳಿಗೆ ಹೋಗುವುದಿಲ್ಲ. ಆದರೆ ರವಿಶಂಕರ್ ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 160 ಮತಗಳ ಅಂತರದಿಂದ ಸೋಲುಂಡರೂ ಆರು ವರ್ಷಗಳಿಂದ ಜನರ ದನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತುಕೊಡುವುದರ ಜೊತೆಗೆ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 320 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿನ ಕಾಮಗಾರಿಗೂ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಶಿಕ್ಷಕರ ಸಮಸ್ಯೆಗಳನ್ನು ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನೀತಿ ಸಂಹಿತೆ ತೆರವಾದ ಬಳಿಕ ಹಂತಹಂತವಾಗಿ ಸಮಸ್ಯೆ ಬಗೆಹರಿಸಲಿದ್ದಾರೆ. ಪದವೀಧರರಿಗೆ ಉದ್ಯೋಗ ಕಲ್ಪಿಸಲು ವಿವಿಧ ಇಲಾಖೆಗಳಲ್ಲಿ ನೇಮಕಾತಿ ಆರಂಭಿಸಲಾಗಿದೆ. ಒಟ್ಟಾರೆ ಪದವೀಧರರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದರು.
ನೋಂದಾಯಿತ ಪ್ರತಿಯೊಬ್ಬರು ಜೂನ್ 13ರಂದು ರವಿಶಂಕರ್ ಅವರಿಗೆ ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಿ ವಿಧಾನಪರಿಷತ್ ಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಹೇಳಿದರು.
ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ಮೂಡಾ ಅಧ್ಯಕ್ಷರಾದ ರಾಜೀವ್ ಸೇರಿದಂತೆ ಹಲವು ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.