ಮನೆ ರಾಜ್ಯ ಕಾಲ್ತುಳಿತ ದುರಂತ: “ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ?” : ಶೋಭಾ ಕರಂದ್ಲಾಜೆ

ಕಾಲ್ತುಳಿತ ದುರಂತ: “ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ?” : ಶೋಭಾ ಕರಂದ್ಲಾಜೆ

0

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. “ಈ ದುರಂತದ ನೇರ ಹೊಣೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರದ್ದೇ. ಅವರು ಅಧಿಕಾರಿಗಳ ವಿರುದ್ಧ ಹೊಣೆ ಹಾಕದೆ, ನೈತಿಕತೆಯಿಂದ ರಾಜೀನಾಮೆ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ ಮಾತನಾಡುತ್ತಾ, ಪ್ರಕರಣದ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ನೀವು ಯಾವುದೇ ನಿರ್ಧಾರ ಮಾಡಿದರೂ ಅದಕ್ಕೆ ನಾವು ಸಿದ್ಧ ಎಂದು ಸರಕಾರ ತಿಳಿಸಲಿ ಎಂದು ಸವಾಲೆಸೆದರು. ಪೊಲೀಸ್ ಕಮೀಷನರ್ ಅವರ ಅಮಾನತು ಸರಕಾರಕ್ಕೆ ತನ್ನ ತಪ್ಪುಗಳ ಮೇಲೆ ಕಳಂಕವಾಗಿದೆ ಎಂಬುದನ್ನು ತೋರುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಕ್ಷೇತ್ರದ ಎಂ.ಟೆಕ್. ಓದುವ ಹುಡುಗನೊಬ್ಬ ಮೃತಪಟ್ಟಿದ್ದು, ಅವನ ಮನೆಗೆ ಹೋಗಬೇಕೆಂದಿದ್ದೆ. ಅವರ ಕುಟುಂಬ ತೀವ್ರ ಖಿನ್ನತೆಗೆ ಸಿಲುಕಿದ್ದು, ಮಗನ ಮೃತದೇಹವನ್ನೇ ಮನೆಗೆ ತರಲಿಲ್ಲ ಎಂದು ಶೋಭಾ ಕರಂದ್ಲಾಜೆ ಅವರು ಬೇಸರ ವ್ಯಕ್ತಪಡಿಸಿದರು. ಯಾರೂ ನೋಡಲು ಬರಬೇಡಿ ಎಂದು ಹೇಳಿದ್ದಾಗಿ ವಿವರಿಸಿದರು. ಒಬ್ಬನೇ ಮಗನನ್ನು ಕಳಕೊಂಡ ನಾವ್ಯಾಕೆ ಬದುಕಿರಬೇಕು ಎಂಬ ರೀತಿಯಲ್ಲಿ ತಂದೆ ತಾಯಿ ಮಾತನಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

“ಯಾವುದೇ ವಿಷಯದಲ್ಲಿ ಮೂಗು ತೂರಿಸುವ ರಾಹುಲ್ ಗಾಂಧಿ, ಸುರ್ಜೇವಾಲಾ ಈಗ ಎಲ್ಲಿದ್ದಾರೆ? ಎಂದು ಪ್ರಶ್ನೆ ಎಸೆದರು. ಆರ್‌ಸಿಬಿಯ, ಮ್ಯಾನೇಜ್‍ಮೆಂಟ್ ತಂಡದವರನ್ನೂ ಬಂಧಿಸಿದ್ದಾರೆ. ಯಾಕೆ ನಿಮ್ಮನ್ನು ಬಂಧಿಸಬಾರದು? ನಟ ಅಲ್ಲು ಅರ್ಜುನ್ ಕಾರ್ಯಕ್ರಮದಲ್ಲಿ ಒಬ್ಬರು ಸತ್ತಾಗ ಅಲ್ಲು ಅರ್ಜುನ್‍ರನ್ನು ಮನೆಯಿಂದ ಎಳೆದುಕೊಂಡು ಬಂದಿದ್ದರು. ಅಲ್ಲಿಯೂ ಕಾಂಗ್ರೆಸ್ ಸರಕಾರ ಇತ್ತು. ಅವರಂತೆ ಇಲ್ಲಿ ಯಾಕೆ ಆಗುತ್ತಿಲ್ಲ ಎಂದು ಕೇಳಿದರು.

“ಸರಕಾರದ ಪ್ರಕಾರ 70ಕ್ಕೂ ಹೆಚ್ಚು ಗಾಯಾಳುಗಳ ಮಾಹಿತಿ ಅವರಲ್ಲಿಲ್ಲ. ವೈದೇಹಿ ಆಸ್ಪತ್ರೆಯಲ್ಲಿ ಗಾಯಾಳುಗಳ ಕುಟುಂಬವೇ ಚಿಕಿತ್ಸೆ ಖರ್ಚು ಪೂರೈಸುತ್ತಿದೆ. ಸರಕಾರ ಕೊಡುವುದಾಗಿ ಹೇಳಿದರೂ, ಅದೇನು ಬೇಗ ಕೊಡುತ್ತಿಲ್ಲ” ಎಂಬ ದೂರವನ್ನೂ ಅವರು ಒತ್ತಿಹೇಳಿದರು. “ಪದವಿ ಓದುತ್ತಿದ್ದ ಹುಡುಗಿಯೊಬ್ಬಳ ಗರ್ಭಕೋಶಕ್ಕೆ ತೊಂದರೆಯಾಗಿದೆ. ತಾಯಿ ದಿನವೂ ಅಳುತ್ತಾ ಕುಳಿತಿದ್ದಾರೆ. ಇದೊಂದು ಮನುಷ್ಯತ್ವವಿಲ್ಲದ ಆಡಳಿತದ ಸಂಕೇತ” ಎಂದಿದ್ದಾರೆ.

ಪ್ರಾರಂಭದಲ್ಲಿ ಡಿಸಿ ಜಗದೀಶ್ ನೇತೃತ್ವದ ಸಮಿತಿ ರಚಿಸಿದ್ದ ಸರಕಾರ, ಬಳಿಕ ನ್ಯಾಯಮೂರ್ತಿ ಮೈಕೆಲ್ ಡಿಕುನ್ಹ ಅವರನ್ನು ನೇಮಿಸಿದ್ದು ಪ್ರಶ್ನೆಗೆ ಒಳಪಟ್ಟಿದೆ. “ಅವರು ಈಗಾಗಲೇ ಕೋವಿಡ್ ಹಗರಣಗಳ ತನಿಖೆಯಲ್ಲಿ ತೊಡಗಿದ್ದಾರೆ. ನಿವೃತ್ತ ನ್ಯಾಯಾಧೀಶರ ಕುರಿತು ನಮ್ಮದೇನೂ ವಿರೋಧ ಇಲ್ಲ. ಆದರೆ, ಅವರೊಬ್ಬರೇ ನಿಮಗೆ ಸಿಗುತ್ತಾರಾ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಉದ್ದೇಶ ಏನು? ಎಂದು ಕೇಳಿದರಲ್ಲದೆ, ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆಂದೇ ಜಗದೀಶ್ ಮತ್ತು ನ್ಯಾ. ಮೈಕೆಲ್ ಡಿಕುನ್ಹ ಅವರಿಗೆ ತನಿಖೆ ವಹಿಸಿದ್ದಾರೆ ಎಂದು ಆರೋಪಿದರು.

ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯನವರು ಕಾರ್ಯಕ್ರಮದ ಬಗ್ಗೆ ಟ್ವೀಟ್ ಮೂಲಕ ಆಹ್ವಾನ ನೀಡಿದಿರುವುದನ್ನೂ ಉಲ್ಲೇಖಿಸಿ, “ಇದು ಸರ್ಕಾರದ ಜವಾಬ್ದಾರಿಯೇ ಆಗುತ್ತದೆ. ಸರ್ಕಾರವೇ ಜನರ ಪ್ರಾಣಕ್ಕೆ ಬೆಲೆಕೊಡದೇ ಉತ್ಸವದ ಏರ್ಪಾಡಿನಲ್ಲಿ ನಿರ್ಲಕ್ಷ್ಯ ತೋರಿಸಿದೆ” ಎಂದು ಹೇಳಿದರು.