ಮನೆ ಕ್ರೀಡೆ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆ: ಡಿಎನ್‌ಎ ಹಾಗೂ ಆರ್‌ಸಿಬಿ ಹೈಕೋರ್ಟ್ ಮೊರೆ

ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆ: ಡಿಎನ್‌ಎ ಹಾಗೂ ಆರ್‌ಸಿಬಿ ಹೈಕೋರ್ಟ್ ಮೊರೆ

0

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮತ್ತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಡಿಎನ್‌ಎ ಸಂಸ್ಥೆ ಸಲ್ಲಿಸಿದ ವಿವರಣೆ:

  • ಆರ್‌ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವೇ ವಿಧಾನಸೌಧದಲ್ಲಿ ಆಯೋಜಿಸಿತ್ತು.
  • ಕಾರ್ಯಕ್ರಮದ ಪೂರ್ಣ ನಿಯಂತ್ರಣ ಸರ್ಕಾರದ ಕೈಯಲ್ಲಿತ್ತು.
  • ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಕಾಲ್ತುಳಿತ ಉಂಟಾಗಲು ನೇರ ಕಾರಣ.
  • ಈ ಹಿಂದೆ ಭಾರತ ಟಿ-20 ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಲಾಗಿತ್ತು. ಮುಂಬೈನಲ್ಲಿ ಭಾರತ ತಂಡಕ್ಕೆ ನಡೆದ ವಿಜಯೋತ್ಸವದ ಉದಾಹರಣೆ ನೀಡಿ, 3 ಲಕ್ಷ ಮಂದಿ ಭಾಗವಹಿಸಿದ್ದರೂ ಯಾವುದೇ ಅವಘಡವಾಗಿಲ್ಲ ಎಂದಿದ್ದಾರೆ.
  • ಜೂನ್ 3ರಂದೇ ಆರ್‌ಸಿಬಿ ಪರೇಡ್‌ಗೆ ಅವಕಾಶ ಕೋರಿ ಪತ್ರ ನೀಡಲಾಗಿತ್ತು, ಆದರೆ ತೆರೆದ ಬಸ್ ಪರೇಡ್‌ಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.
  • ಸರ್ಕಾರ, ಕೆಎಸ್‌ಸಿಎ ಜೊತೆ ಸಭೆ ನಡೆಸಿ ಕಾರ್ಯಕ್ರಮ ರೂಪಿಸಿಕೊಂಡು ಅದರ ಪ್ರಕಾರ ಭದ್ರತೆ ನಿಗದಿಯಾಗಿತ್ತು. ಆದರೆ ಅಗತ್ಯದಷ್ಟು ಪೊಲೀಸರನ್ನು ನಿಯೋಜಿಸಿಲ್ಲ.
  • ಈ ಕಾರಣದಿಂದಾಗಿ ಡಿಎನ್‌ಎ ಸಂಸ್ಥೆಯೇ 584 ಖಾಸಗಿ ಸಿಬ್ಬಂದಿ ನೇಮಕ ಮಾಡಬೇಕಾಯಿತು.

ಆರ್‌ಸಿಬಿಯ ಸ್ಪಷ್ಟನೆ: ಈ ಕಾರ್ಯಕ್ರಮಕ್ಕೆ ಆರ್‌ಸಿಬಿ ಯಾವುದೇ ಪ್ರತ್ಯಕ್ಷ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಕೇವಲ ಆಟಗಾರರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವ ಹೊಣೆ ಆರ್‌ಸಿಬಿಗೆ ಇತ್ತು. ಸರ್ಕಾರದ ಅನುಮತಿ ಪಡೆದ ನಂತರವೇ ಕಾರ್ಯಕ್ರಮದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿದೆ. ಕೆಎಸ್‌ಸಿಎ ಕೂಡ ಜೂನ್ 3ರಂದು ಅನುಮತಿ ನೀಡಿರುವುದಾಗಿ ದೃಢಪಡಿಸಿದ್ದು, ಆಧಾರದ ಮೇಲೆ ಮಾತ್ರ ಪೋಸ್ಟ್‌ಗಳನ್ನು ಶೇರ್ ಮಾಡಲಾಗಿದೆ.

ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಾಗೂ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಹೈಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ, ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕೆಂದು ಕೋರಲಾಗಿದೆ. ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಸುಳ್ಳು ಆರೋಪಗಳ ಮೂಲಕ ಬಂಧನಕ್ಕೆ ಮುಂದಾಗಿದೆ ಎಂದು ಆರೋಪಿಸಲಾಗಿದೆ.