ಬೆಂಗಳೂರು : ‘ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ಮಸೂದೆ’ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿಯನ್ನು 2028ರ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಡಿಸೆಂಬರ್ 8 ರಿಂದ ಆರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಸರ್ಕಾರ ಮಂಡಿಸಲು ತಯಾರಿ ನಡೆಸಿದೆ.
ಹಾಗೆಯೇ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವೇತನ, ಪಿಎಫ್, ಇಎಸ್ಐ ಮತ್ತು ಇತರ ಸವಲತ್ತುಗಳ ಪಾವತಿಯಲ್ಲಿ ವಿಳಂಬದ ಜೊತೆಗೆ ಕಡಿಮೆ ಪಾವತಿ ಮೂಲಕ ಹೊರಗುತ್ತಿಗೆ ಸಿಬ್ಬಂದಿಯನ್ನು ಖಾಸಗಿ ಏಜೆನ್ಸಿಗಳು ಶೋಷಣೆ ಮಾಡುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ.
2022-23ರ ಬಜೆಟ್ ಅಂದಾಜಿನ ಪ್ರಕಾರ, 7,69,982 ಹುದ್ದೆಗಳ ಮಂಜೂರಾತಿಯಲ್ಲಿ 43 ಸರ್ಕಾರಿ ಇಲಾಖೆಗಳಲ್ಲಿ 2,58,709 ಹುದ್ದೆಗಳು ಖಾಲಿ ಇವೆ. ಆದರೆ ಎಲ್ಲಾ ಇಲಾಖೆಗಳು ಒಟ್ಟಾಗಿ 3 ಲಕ್ಷಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಂಡಿವೆ. “ಸರ್ಕಾರದಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಖಾಸಗಿ ಏಜನ್ಸಿಗಳಿಂದ ಹೊರಗುತ್ತಿಗೆ ಸಿಬ್ಬಂದಿ ಮೇಲಿನ ಕಿರುಕುಳ ಹಾಗೂ ಭ್ರಷ್ಟಾಚಾರ ತೊಲಗಿಸಲು ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿ ವ್ಯವಸ್ಥೆ ರದ್ದುಗೊಳಿಸಲು ನಿರ್ಧರಿಸಲಾಗಿದೆ” ಎಂದು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಹೊರಗುತ್ತಿಗೆ ಸಂಸ್ಥೆಗಳ ಜೊತೆಗಿನ ಎಲ್ಲಾ ವ್ಯವಸ್ಥೆ ಮತ್ತು ಒಪ್ಪಂದಗಳನ್ನು ಸರ್ಕಾರವು ಮಾರ್ಚ್ 31, 2028 ರೊಳಗೆ ಹಂತಹಂತವಾಗಿ ಕಡಿತಗೊಳಿಸಲಿದೆ. ಅಲ್ಲಿಯವರೆಗೆ, ಹೊರಗುತ್ತಿಗೆ ಪಡೆದ ಉದ್ಯೋಗಿಗಳನ್ನು ನಿರ್ವಹಿಸಲು ರಾಜ್ಯಾದ್ಯಂತ ‘ಬೀದರ್ ಮಾದರಿ’ಯನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಮಾದರಿಯಡಿ, ಗುತ್ತಿಗೆ ನೌಕರರಿಗೆ ವೇತನ ಮತ್ತು ಇತರ ಸವಲತ್ತುಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಸಹಕಾರಿ ಸಂಘದ ಮೂಲಕ ನೇರವಾಗಿ ವಿತರಿಸಲಾಗುತ್ತದೆ. ಇದರಿಂದಾಗಿ ಖಾಸಗಿ ಸಂಸ್ಥೆಗಳ ಪಾತ್ರವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.
“ಎಲ್ಲಾ ಇಲಾಖೆಗಳು ಹೊರಗುತ್ತಿಗೆ ಮೂಲಕ ಸಿಬ್ಬಂದಿಯನ್ನು ನೇಮಿಸಿದ ನಂತರ, ಅವರ ಹೆಸರುಗಳನ್ನು ಸಂಘಕ್ಕೆ ಕಳುಹಿಸುತ್ತವೆ. ಸಂಘವು ಪ್ರತಿಯಾಗಿ, ಈ ಹೆಸರುಗಳನ್ನು ನೋಂದಾಯಿಸುತ್ತದೆ ಮತ್ತು ಸಮಯಕ್ಕೆ ಸರಿಯಾಗಿ PF/ESI ಪಾವತಿಸುವ ಜೊತೆಗೆ ವೇತನವನ್ನು ಮಾಡುತ್ತದೆ” ಎಂದು ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ಬಹುಪಯೋಗಿ ಸಹಕಾರಿ ಸಂಘದ ಕಾರ್ಯದರ್ಶಿ ಅರ್ಜುನ್ ಸೀತಲಗೇರ್ ತಿಳಿಸಿದ್ದಾರೆ. ಈ ವ್ಯವಸ್ಥೆಯಿಂದ ಹೊರಗುತ್ತಿಗೆ ಸಿಬ್ಬಂದಿಯನ್ನು ಏಜೆನ್ಸಿಗಳ ಕಿರುಕುಳ ಮತ್ತು ಶೋಷಣೆಯಿಂದ ರಕ್ಷಿಸಲು ಸಾಧ್ಯವಾಗಲಿದೆ. ಸಾಮಾನ್ಯವಾಗಿ ಹೊರಗುತ್ತಿಗೆ ಸಿಬ್ಬಂದಿಗೆ ಏಜನ್ಸಿಗಳು ಕನಿಷ್ಠ ವೇತನಕ್ಕಿಂತ ಕಡಿಮೆ ಪಾವತಿಸುವುದು, PF ಮತ್ತು ESI ಪಾವತಿಯನ್ನು ವಿಳಂಬ ಮಾಡುತ್ತವೆ ಎಂಬ ಆರೋಪವಿದೆ ಎಂದು ಅರ್ಜುನ್ ಹೇಳಿದರು.
ಬೀದರ್ ಮಾದರಿಯನ್ನು ಅಳವಡಿಸಿಕೊಳ್ಳುವುದರಿಂದ ಈ ಉದ್ಯೋಗಿಗಳ ಹಿತಾಸಕ್ತಿಗಳನ್ನು ರಕ್ಷಿಸಲಾಗುತ್ತದೆ. ಅಷ್ಟೇ ಅಲ್ಲ ಸರ್ಕಾರಕ್ಕೆ ತನ್ನ ಹೊರಗುತ್ತಿಗೆ ಕಾರ್ಯಪಡೆಯ ನಿಖರ ಮತ್ತು ಪಾರದರ್ಶಕ ಡೇಟಾವನ್ನು ಒದಗಿಸುತ್ತದೆ. ರಾಜ್ಯಾದ್ಯಂತ ಸರ್ಕಾರಿ ಇಲಾಖೆಗಳಲ್ಲಿ ಎಷ್ಟು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತು ನಮ್ಮಲ್ಲಿ ಯಾವುದೇ ಡೇಟಾ ಇಲ್ಲ. ಖಾಸಗಿ ಸಂಸ್ಥೆಗಳು ಒದಗಿಸಿದ ಸಂಖ್ಯೆಗಳನ್ನು ಪರಿಶೀಲಿಸಲು ಯಾವುದೇ ವ್ಯವಸ್ಥೆ ಇಲ್ಲ. ಬೀದರ್ ಮಾದರಿಯು ಈ ಎಲ್ಲದಕ್ಕೂ ಪರಿಹಾರ ನೀಡಲಿದೆ ಎಂದು ಈಟಿವಿ ಭಾರತ್‌ಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಸುಮಾರು 3,000 ಹೊರಗುತ್ತಿಗೆ ಸಿಬ್ಬಂದಿಯು ಸೊಸೈಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. “ನಾವು ಈ ಎಲ್ಲ ಸಿಬ್ಬಂದಿಯ ಪಿಎಫ್ ಮತ್ತು ಇಎಸ್ಐ ಪಾವತಿಯನ್ನು ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಪಾವತಿಸುತ್ತಿದ್ದೇವೆ. ವೇತನವನ್ನು ಸಹ ಸಮಯಕ್ಕೆ ಸರಿಯಾಗಿ ಪಾವತಿಸಲಾಗುತ್ತಿದೆ. ನಾವು ಪ್ರತಿ ತಿಂಗಳು ಶೇ.18 ರಷ್ಟು ಜಿಎಸ್ಟಿಯನ್ನು ಸಹ ಸಮಯಕ್ಕೆ ಸರಿಯಾಗಿ ಪಾವತಿಸುತ್ತಿದ್ದೇವೆ” ಎಂದು ಅರ್ಜುನ್ ಹೇಳುತ್ತಾರೆ.














