ಹುಬ್ಬಳ್ಳಿ: ಇದೊಂದು ಸುಳ್ಳು ಲೆಕ್ಕ, ಕಳ್ಳ ಬಿಲ್ ನ ಭ್ರಷ್ಟಾಚಾರ ಸರ್ಕಾರವಾಗಿದ್ದು, ಹಗರಣ ಹಾಗೂ ಕಾಂಗ್ರೆಸ್ ನ ಆಂತರಿಕ ಕಚ್ಚಾಟದಿಂದಾಗಿ ದೀಪಾವಳಿ ವೇಳೆಗೆ ರಾಜ್ಯ ಸರ್ಕಾರ ಢಮಾರ್ ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ಇಲ್ಲಿನ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಕೆಳಗಿಳಿಯುವುದು ಖಚಿತ ಎಂಬ ನಿಟ್ಟನಲ್ಲಿ ಕಾಂಗ್ರೆಸ್ ನಲ್ಲಿ ಡಜನ್ ಆಕಾಂಕ್ಷಿಗಳು ಸಕ್ರಿಯರಾಗಿದ್ದಾರೆ. ಬಾಹ್ಯವಾಗಿ ಸಿಎಂ ಬೆಂಬಲ ಎನ್ನುತ್ತಲೇ ಆಂತರಿಕವಾಗಿ ಸಿದ್ದು ಕೆಳಗಿಳಿಯುವುದು ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಸರ್ಕಾರದ ಆಯುಷ್ಯ ಸಂಕ್ರಾಂತಿವರೆಗೆ ಎಂಬುದು ದೂರವಾಯಿತು, ದೀಪಾವಳಿಗೆ ಈ ಸರ್ಕಾರ ಢಮಾರ್ ಖಚಿತ ಎಂದರು.
ಮುಂದಿನ ದಿನಗಳಲ್ಲಿ ಹೊಸ ಸಿಎಂ ಬರುತ್ತಾರೋ, ಹೊಸ ಸರ್ಕಾರ ಬರುತ್ತದೋ? ಕೆಲ ವಿಷಯಗಳನ್ನು ಕಾಲವೇ ನಿರ್ಣಯಿಸುತ್ತದೆ. ಕಾದು ನೋಡಿ ಎಂದು ಸಿ.ಟಿ ರವಿ ಹೇಳಿದರು.
ಹಿಂದೂಗಳು ಸಂಘಟಿತರಾಗದಿದ್ದರೆ, ನಮ್ಮ ಶಕ್ತಿ ಕುಂದಿದರೆ ಮತ್ತೊಂದು ಬಾಂಗ್ಲಾ, ಪಾಕ್ ಆಗಲಿದೆ ಎಂದ ಅವರು, ಹುಬ್ಬಳ್ಳಿ ಚನ್ನಮ್ಮ ಮೈದಾನದಲ್ಲಿ 30 ವರ್ಷಗಳ ಹಿಂದೆ ಚನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜ ಹೋರಾಟ ಮಾಡಿ ಯಶಸ್ವಿಯಾಗಿದ್ದ ನಾವು ಇದೀಗ ಅದೇ ಮೈದಾನದಲ್ಲಿ ಭಗವಾಧ್ವಜ ಹಾರಿಸಿದ್ದೇವೆ ಎಂದರು.
ಅರ್ಕಾವತಿ, ವಾಲ್ಮೀಕಿ, ಮುಡಾ ಹೀಗೆ ಸಾಲು, ಸಾಲು ಹಗರಣ, ಭ್ರಷ್ಟಾಚಾರದ ಸರ್ಕಾರ ಇದಾಗಿದೆ. ಶೇ.100 ಭ್ರಷ್ಟಾಚಾರದ ಸರ್ಕಾರ ಇದು. ಈ ಸರ್ಕಾರ ಉಳಿಯಬಾರದು. ತಮ್ಮ ಹಗರಣಗನ್ನು ಮುಚ್ಚಿಕೊಳ್ಳಲು ಸರ್ಕಾರ ಬಿಜೆಪಿ ಕಾಲದ ಹಗರಣ ತನಿಖೆ ಎಂಬ ಬೆದರಿಕೆಗೆ ಮುಂದಾಗಿದೆ. ತನಿಖೆ ಮಾಡಲಿ ಬೇಡ ಎನ್ನುವವರು ಯಾರು? ತಪ್ಪು ಮಾಡಿದವರು ಯಾರೇ ಇರಲಿ ಶಿಕ್ಷೆ ಆಗಲಿ ಎಂದರು.