ಮನೆ ಸುದ್ದಿ ಜಾಲ ಜೂನ್ 4 ರಂದು ರಾಜ್ಯ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

ಜೂನ್ 4 ರಂದು ರಾಜ್ಯ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

0

ಮೈಸೂರು (Mysuru)-ರಾಜ್ಯ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಜೂನ್ 4 ರಂದು ಆಚರಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳಾದ ಡಾ ಗೌತಮ್ ಬಗಾದಿ (Dr. Bagadi Gautam) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಮೈಸೂರು ನಗರದ ಕೆ.ಆರ್.ವೃತ್ತದಲ್ಲಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಗೆ ಅಂದು ಮಾಲಾರ್ಪಣೆ ಮಾಡಲಾಗುವುದು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಲಂಕೃತ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾ ತಂಡಗಳು ಸಂಘ ಸಂಸ್ಥೆಗಳ ಜೊತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು. ನಗರದ ಅರಮನೆಯಲ್ಲಿರುವ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಳ್ಳುವುದು. ನಂತರ ಕಲಾಮಂದಿರದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಿಂದ ನಾಲ್ವಡಿ ಅವರನ್ನು ಕುರಿತ ಉಪನ್ಯಾಸ ಆಯೋಜಿಸಲಾಗುವುದು. ಅಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಗೀತ ಗಾಯನ, ನಾಟಕ ಹಾಗೂ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಆಧುನಿಕ ಮೈಸೂರಿನ ಶಿಲ್ಪಿ ಎಂದೇ ಹೆಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯಲ್ಲಿ ಸಮಾಜದ ಎಲ್ಲಾ ವರ್ಗದವರೂ ಭಾಗವಹಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು. ಸರ್ಕಾರಿ ನೌಕರರು ಕಡ್ಡಾಯವಾಗಿ ಸಮಾರಂಭದಲ್ಲಿ ಭಾಗವಹಿಸಬೇಕೆಂದು ತಿಳಿಸಲಾಯಿತು.

ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಗಳಿಗೆ ಕ್ರಮವಹಿಸಲು ಸೂಚಿಸಿದರು. ನಾಲ್ವಡಿ ಅವರ ಜೀವನ ಹಾಗೂ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಕಿರುಹೊತ್ತಿಗೆಯನ್ನು ಮುದ್ರಿಸಿ ವಿತರಿಸಲು ನಿರ್ಣಯಿಸಲಾಯಿತು. ಕೃಷ್ಣರಾಜ ಒಡೆಯರ್ ಜಯಂತಿಗೆ ಸರ್ಕಾರವು 5 ಲಕ್ಷ ರೂ. ಬಿಡುಗಡೆ ಮಾಡಿದ್ದು, ಯಶಸ್ವಿಯಾಗಿ ಆಚರಿಸಲು ಸರ್ವರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿಗಳಾದ ಡಾ. ಮಂಜುನಾಥಸ್ವಾಮಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಹಾಗೂ ಕನ್ನಡ ಪರ ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದರು.