ಶಿವಮೊಗ್ಗ: ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಗೆ ಜಿಲ್ಲಾ ಎನ್ ಎಸ್ ವಿ ದೂರು ನೀಡಿದ್ದು, ಸಿಆರ್ ಪಿಸಿ ಕಲಂ 157 ಅಡಿ ಎಫ್ ಐಆರ್ ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ ಸಂಬಂಧಿಸಿದಂತೆ ಮಕ್ಕಳು ಧಾರ್ಮಿಕವಾಗಿ ಪರಿಣಾಮ ಬೀಳುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್ ಎಸ್ ವಿ ಸದಸ್ಯರು ದೂರು ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಸಮಯಾವಕಾಶ ನೀಡಲು ಬೆಳಗ್ಗಿನ ಪರೀಕ್ಷೆಗಳನ್ನು ಮಧ್ಯಾಹ್ನದ ನಂತರ ನಿಗದಿ ಮಾಡಲಾಗಿದೆ ಎಂಬ ಬಲಪಂಥೀಯರು ಟೀಕಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ (ಟ್ವಿಟರ್) ವೇಳಾಪಟ್ಟಿ ಹಂಚಿಕೊಂಡ ಚಕ್ರವರ್ತಿ ಸೂಲಿಬೆಲೆ, ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಲ್ಲಾ ಪರೀಕ್ಷೆಗಳು ಬೆಳಗ್ಗಿನ ಅವಧಿಯಲ್ಲಿ ನಡೆಯಲಿದೆ. ಶುಕ್ರವಾರ ಮಾತ್ರ ಯಾಕೆ ಮಧ್ಯಾಹ್ನದ ನಂತರ ಎಂದು ಪ್ರಶ್ನಿಸಿದ್ದರು. ಅಲ್ಲದೆ, ನಮಾಜ್ ಗೆ ಸಮಯವೇ ಎಂದು ಪ್ರಶ್ನಿಸಿದ್ದರು.
ಪರೀಕ್ಷಾ ಮಂಡಳಿ ಸ್ಪಷ್ಟನೆ
ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧ ಸ್ಪಷ್ಟನೆ ನೀಡಿದ ಪರೀಕ್ಷಾ ಮಂಡಳಿ, ಮಾರ್ಚ್ 1ರಂದು ದ್ವಿತೀಯ ಪಿಯು ಮುಖ್ಯ ಪರೀಕ್ಷೆ ಬೆಳಗ್ಗೆ ನಡೆಯುವ ಕಾರಣ ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ ನಿಗದಿಮಾಡಲಾಗಿದೆ ಸ್ಪಷ್ಟನೆ ನೀಡಿದೆ.