ಮೈಸೂರು: ಬೇಸಿಗೆ ಆರಂಭವಾಗಿದ್ದು ಬಿಸಿಲ ತಾಪ ಹೆಚ್ಚಾಗುತ್ತಿರುವುದರಿಂದ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಇರುವುದರಿಂದ ಇದರ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸುವ ಮೂಲಕ ಕಾಡ್ಗಿಚ್ಚು ತಡೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಬೆಂಕಿ ಅನಾಹುತ ತಡೆಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸುವುದರ ಜೊತೆಗೆ ಸಂಘ ಸಂಸ್ಥೆಗಳ ನೆರವು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಅರಣ್ಯ ಪ್ರದೇಶದ ಅಲ್ಲಲ್ಲಿ ನೀರಿನ ಟ್ಯಾಂಕರ್ ಗಳನ್ನು ಇರಿಸಬೇಕು. ಬೆಂಕಿ ವಾಚರ್ ಗಳನ್ನು ನೇಮಿಸಬೇಕು. ಕಾಡ್ಗಿಚ್ಚಿನ ಬಗ್ಗೆ ಅರಣ್ಯದಂಚಿನ ಗ್ರಾಮಗಳ ಜನತೆಗೆ ಅರಿವು ಮೂಡಿಸುವುದರ ಜೊತೆಗೆ ಅವರ ಸಹಕಾರ ಪಡೆದುಕೊಳ್ಳಬೇಕು. ಅಗ್ನಿಶಾಮಕ ದಳದ ನೆರವನ್ನು ಪಡೆದುಕೊಳ್ಳಬೇಕು. ಗ್ರಾಮಸಭೆಗಳನ್ನು ಮಾಡಿ ಸ್ವಯಂ ಸೇವಕರನ್ನು ಸನ್ನದ್ಧಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದ್ದಾರೆ.
ಕಾಡ್ಗಿಚ್ಚಿನಿಂದ ಪ್ರತಿವರ್ಷ ಅಪಾರ ಪ್ರಮಾಣದ ವನ್ಯ ಸಂಪತ್ತು ನಾಶವಾಗುತ್ತಿದೆ. ಮುಂಜಾಗ್ರತೆ ವಹಿಸಿದರೆ ಇದನ್ನು ತಡೆಗಟ್ಟಬಹುದು. ಬೇಸಿಗೆ ಆರಂಭವಾಗಿರುವುದರಿಂದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು ಎಂದು ತಿಳಿಸಿದ್ದಾರೆ.