ಮನೆ ಕಾನೂನು ವಾಕ್ಸಮರ ಅಂತ್ಯಗೊಳಿಸಿ ಸಂಧಾನಕ್ಕೆ ಮುಂದಾಗಿ: ರೂಪ-ರೋಹಿಣಿಗೆ ಸುಪ್ರೀಂಕೋರ್ಟ್‌ ಸಲಹೆ

ವಾಕ್ಸಮರ ಅಂತ್ಯಗೊಳಿಸಿ ಸಂಧಾನಕ್ಕೆ ಮುಂದಾಗಿ: ರೂಪ-ರೋಹಿಣಿಗೆ ಸುಪ್ರೀಂಕೋರ್ಟ್‌ ಸಲಹೆ

0

ಬೆಂಗಳೂರು: ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ಗೆ ಸುಪ್ರೀಂಕೋರ್ಟ್‌ ಮಂಗಳವಾರ ಸಲಹೆ ನೀಡಿದೆ.

Join Our Whatsapp Group

ಸಿಂಧೂರಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿರುವುದನ್ನು ಪ್ರಶ್ನಿಸಿ ರೂಪಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಭಯ್‌ ಶ್ರೀನಿವಾಸ್‌ ಓಕ್‌ ಮತ್ತು ಪಂಕಜ್‌ ಮಿತ್ತಲ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಇಬ್ಬರೂ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿದ್ದು, ಈ ನಡತೆ ಮುಂದುವರಿಯಬಾರದು. ಇಬ್ಬರೂ ಯುವ ಅಧಿಕಾರಿಗಳಾಗಿದ್ದು, ಈ ಹಣಾಹಣಿ ಮುಂದುವರಿದರೆ ಅವರ ವೃತ್ತಿಗೆ ಹಾನಿಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಉಭಯ ಪಕ್ಷಕಾರರು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ.

ಕಳೆದ ಡಿಸೆಂಬರ್‌ 15ರಂದು ಪ್ರಕರಣಕ್ಕೆ ತಡೆ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು ಮಾಧ್ಯಮಗಳಲ್ಲಿ ಮಾತನಾಡದಂತೆ ಉಭಯ ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಅಲ್ಲದೇ, ವಿವಾದ ಬಗೆಹರಿಸಿಕೊಳ್ಳಲು ಸಂಧಾನಕ್ಕೆ ಮುಂದಾಗುವಂತೆ ಸಲಹೆ ನೀಡಿತ್ತು.

ಅಧಿಕಾರಿಗಳಿಬ್ಬರ ಕಚ್ಚಾಟಕ್ಕೆ ಸಂಬಂಧಿಸಿದಂತೆ ಸರ್ಕಾರವು ಇಲಾಖಾ ತನಿಖೆ ನಡೆಸುತ್ತಿದ್ದರೆ, ಈ ವಿಚಾರದಲ್ಲಿ ಮುಂದುವರಿಯದಂತೆ ಸರ್ಕಾರಕ್ಕೂ ಸೂಚಿಸಲಾಗುವುದು ಎಂದು ಹೇಳಿತು.

ಸಿಂಧೂರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಸಿಂಧೂರಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಬಯಸಿಲ್ಲ. ಪರಿಹಾರ ಸಾಧ್ಯತೆಯ ಬಗ್ಗೆ ಸಿಂಧೂರಿ ಜೊತೆ ಚರ್ಚಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ. ಡಿ ರೂಪಾ ಪರವಾಗಿ ಹಿರಿಯ ವಕೀಲ ಆದಿತ್ಯ ಸೋಂಧಿ ವಾದಿಸಿದರು.