ಮನೆ ರಾಜ್ಯ ನಗರದಲ್ಲಿ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ – ಒಂದೇ ದಿನ 15 ಮಂದಿ ಮೇಲೆ ದಾಳಿ

ನಗರದಲ್ಲಿ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ – ಒಂದೇ ದಿನ 15 ಮಂದಿ ಮೇಲೆ ದಾಳಿ

0

ಬಾಗಲಕೋಟೆ : ಕೈ, ಕಾಲುಗಳ ಮೇಲೆ ಜಿನುಗುತ್ತಿರುವ ರಕ್ತ, ಗಂಭೀರ ಗಾಯಗೊಂಡವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ಏನೋ ದುರಂತ ನಡೆದಿದೆ ಎಂದು ಗಾಬರಿಯಿಂದ ಮುಗಿಬಿದ್ದಿರುವ ಜನತೆ ಎಂದು ತಿಳಿದುಬಂದಿದೆ.

ಈ ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ. ಕಳೆದ ನಾಲ್ಕೈದು ದಿನಗಳ ಹಿಂದೆ ನವನಗರದ ಎಪಿಎಂಸಿ ಬಳಿ ಹುಚ್ಚು ನಾಯಿಯೊಂದು ಕೆಲಸಕ್ಕೆಂದು ಹೊರಟವರ, ಬಸ್‌ಗಾಗಿ ಕಾಯುತ್ತಿದ್ದವರ ಸುಮಾರು ಹತ್ತು ಜನರ ಮೇಲೆ ತೀವ್ರ ದಾಳಿ ನಡೆಸಿ ಗಾಯಗೊಳಿಸಿತ್ತು. ಸಾಲದು ಎಂಬಂತೆ ಪಕ್ಕದಲ್ಲೇ ಎಪಿಎಂಸಿ ಯಾರ್ಡ್‌ನಲ್ಲಿರುವ ಅಂಧ ಶಾಲಾ ಮಕ್ಕಳ ಮೇಲೂ ದಾಳಿ ನಡೆಸಿ ಕೈ, ಕಾಲು ಸೇರಿ ದೇಹದ ಬೇರೆ ಬೇರೆ ಭಾಗದಲ್ಲಿ ತೀವ್ರವಾಗಿ ಕಚ್ಚಿತ್ತು.

ಒಟ್ಟು 15 ಜನರಿಗೆ ಗಂಭೀರವಾದ ಗಾಯಗಳಾಗಿದ್ದು ಅವರೆಲ್ಲಾ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಘಟನೆಯಿಂದ ನಗರದ ಜನತೆ ಆತಂಕಕ್ಕೊಳಗಾಗಿತ್ತು. ಸಾಮಾನ್ಯ ನಾಯಿಗಳು ಬಳಿ ಬಂದರು ಸಹ ಭಯದಿಂದ ದೂರ ಸರಿಯುವ ರೀತಿಯಾಗಿತ್ತು. ಕಣ್ಣಿದ್ದವರು ಹೇಗೋ ವಾಸಿಯಾಗಿ ಬಿಡುತ್ತಾರೆ.

ಆದರೆ ಜಗತ್ತೇ ಕತ್ತಲಾಗಿದ್ದವರ ಗತಿ ಏನು? ಹೀಗಾಗಿ ಹುಚ್ಚು ನಾಯಿ ಕಡಿತಕ್ಕೊಳಗಾದ ಅಂಧ ಶಾಲಾ ಶಿಕ್ಷಕಿ ಹೇಮಾವತಿ ಹಾಗೂ ಸ್ಥಳೀಯರು ಹುಚ್ಚು ನಾಯಿ, ಬೀದಿ ನಾಯಿಗಳ ಹಾವಳಿಯಿಂದ ನಮ್ಮನ್ನು ರಕ್ಷಿಸಿ, ಮೇಲಿಂದ ಮೇಲೆ ನಾಯಿ ದಾಳಿ ನಡೆಯುತ್ತಿದೆ. ಭಯದಲ್ಲೇ ಜೀವನ ಮಾಡಬೇಕಿದೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತ, ನಗರಸಭೆಗೆ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಬಾಗಲಕೋಟೆ ನಗರದಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿವೆ ಎಂದು ಅಂಕಿ ಅಂಶಗಳೇ ಹೇಳುತ್ತಿವೆ. ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 1669 ಜನರಿಗೆ ನಾಯಿ ಕಡಿತವಾಗಿದೆ. ಪ್ರತಿ ತಿಂಗಳು ಸರಾಸರಿ 200 ಜನ ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಇಬ್ಬರೂ ನಾಯಿ ಕಡಿತದಿಂದ ಸಾವನ್ನಪ್ಪಿದ್ದು ಭಯ ಮೂಡಿಸುತ್ತದೆ. ಒಂದೇ ತಿಂಗಳಲ್ಲಿ ಬಾಗಲಕೋಟೆ ನಗರದಲ್ಲಷ್ಟೇ 30ಕ್ಕೂ ಹೆಚ್ಚು ಜನರ ಮಾರಣಾಂತಿಕ ನಾಯಿ ದಾಳಿಗೆ ಒಳಗಾಗಿದ್ದಾರೆ.

ಬಾಗಲಕೋಟೆ ಮತ್ತು ಇಳಕಲ್‌ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿ ಕಡಿತದ ಪ್ರಕರಣ ಬೆಳಕಿಗೆ ಬಂದಿದೆ. ಹುಚ್ಚು ಹಿಡಿದ ಹಿನ್ನೆಲೆ ನಾಯಿಯನ್ನು ಯಾರೋ ಬೀದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಮಹೇಶ್ ಕೋಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು

ಜಿಲ್ಲಾಸ್ಪತ್ರೆಗೆ ಮೂರು ಕೆಟಗೆರಿಗೆಯಲ್ಲಿ ಪ್ರಕರಣ ದಾಖಲಾಗುತ್ತವೆ. ಕೆಟಗೆರಿ ಮೂರರ ಪ್ರಕರಣಗಳೇ ಜಿಲ್ಲಾಸ್ಪತ್ರೆಗೆ ಹೆಚ್ಚು ದಾಖಲಾಗಿವೆ. ಮೊದಲ ಕೆಟಗೆರಿಯಲ್ಲಿ ಕೇವಲ ಟಿಟಿ ಇಂಜೆಕ್ಷನ್ ಮಾತ್ರ, ಎರಡರಲ್ಲಿ ಟಿಟಿ+ಇಂಟ್ರಾ ಮಸಿಕ್ಯೂಲರ್ ಇಂಜೆಕ್ಷನ್ ಕೊಡಲಾಗುತ್ತೆ ಹಾಗೂ ಕೆಟಗರಿ ಮೂರರ ವ್ಯಕ್ತಿಗಳಿಗೆ ಟಿಟಿ, ಇಂಟ್ರಾ ಮಸಿಕ್ಯೂಲರ್, ಎಆರ್ 5 ಡೋಸ್‌ ಇಂಜೆಕ್ಷನ್ ಕೊಡಲಾಗುತ್ತೆ ಎಂದು ನಾಯಿ ಕಡಿತಕ್ಕೆ ಒಳಗಾಗು ವ್ಯಕ್ತಿಗಳ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ ಮತ್ತು ಪಸು ಸಂಗೋಪನೆ ಇಲಾಖೆಯಿಂದ ತಂಡ ರಚನೆ ಮಾಡಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದಾಗಿ ಮಹೇಶ್ ಕೋಣಿ ತಿಳಿಸಿದರು.