ಮನೆ ರಾಜ್ಯ ಕೆರೆಗೆ ಕೊಳಚೆ ನೀರು ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಈಶ್ವರ ಖಂಡ್ರೆ

ಕೆರೆಗೆ ಕೊಳಚೆ ನೀರು ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಈಶ್ವರ ಖಂಡ್ರೆ

0

ಬೆಂಗಳೂರು: ಕೊಳಚೆ ನೀರು ಸೇರ್ಪಡೆಯಿಂದ ಶಾಪಗ್ರಸ್ತವಾಗಿರುವ ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಸಂಸ್ಕರಿಸದೆ ತ್ಯಾಜ್ಯಜಲ ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು  ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

Join Our Whatsapp Group

ಇಂದು ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಪ್ರಸ್ತುತ 14 ತ್ಯಾಜ್ಯ ಜಲ ಸಂಸ್ಕರಣೆ ಘಟಕ (ಎಸ್.ಟಿ.ಪಿ.) ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಸಾಮರ್ಥ್ಯ 560 ಎಂ.ಎಲ್.ಡಿ. ಆಗಿದೆ. ಈ ಪೈಕಿ 5ನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ರಾಷ್ಟ್ರೀಯ  ಹಸಿರು ನ್ಯಾಯಮಂಡಳಿಯ ನಿರ್ದೇಶನದಂತೆ ತ್ಯಾಜ್ಯ ಜಲ ಸಂಸ್ಕರಣೆ ಘಟಕ (ಎಸ್.ಟಿ.ಪಿ)ಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸೂಚಿಸಿದರು.

ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳ ನೀರು ಕುಡಿಯಲು ಯೋಗ್ಯವಾದರೆ, ನೀರಿನ ಸಮಸ್ಯೆ ಪರಿಹರಿಸಬಹುದು, ಆದರೆ ಹೆಚ್ಚುತ್ತಿರುವ ಜನಸಂಖ್ಯೆ, ಅನಧಿಕೃತವಾಗಿ ತಲೆಎತ್ತುತ್ತಿರುವ ಕಟ್ಟಡಗಳು, ಒತ್ತುವರಿಯ ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ಘನಮತ್ತು ದ್ರವ ತ್ಯಾಜ್ಯ ಕೆರೆಗಳನ್ನು ಮತ್ತು ಜಲ ಮೂಲಗಳನ್ನು ಸೇರುತ್ತಿವೆ. ಇದನ್ನು ನಿಯಂತ್ರಿಸುವ ಗುರುತರ ಜವಾಬ್ದಾರಿ ಇದ್ದು, ಜಲ ಕಾಯಿದೆಯ ರೀತ್ಯ ತ್ಯಾಜ್ಯ ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಐಟಿ, ಬಿಟಿ ನಗರಿಯಾದ ಬೆಂಗಳೂರಿನತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಆಗಲೇಬೇಕು. ಬೆಂಗಳೂರಿನ ಜನಸಂಖ್ಯೆಗೆ ಶುದ್ಧ ಕುಡಿಯುವ ನೀರು ಪೂರೈಕೆಯೂ ಸವಾಲಾಗಿದೆ. ಮುಂದಿನ ದಿನಗಳಲ್ಲಿ ಜಲ  ಕ್ಷಾಮ ತಲೆದೋರುವ ಸಾಧ್ಯತೆಯೂ ಇದ್ದು, ಭವಿಷ್ಯದ ದೃಷ್ಟಿಯಿಂದ ಉಳಿದಿರುವ ಎಲ್ಲ ಕೆರೆಗಳ ಸಂರಕ್ಷಣೆ ನಮ್ಮ ಹೊಣೆಯಾಗಿದೆ. ಈ ಕೆರೆಗಳಿಗೆ ತ್ಯಾಜ್ಯ ಜಲ ಸೇರದಂತೆ ಪರಿಸರ ಮಾಲಿನ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

2017ರಲ್ಲಿ ಬೆಳ್ಳಂದೂರು ಕೆರೆಯಲ್ಲಿ ನೊರೆ ಉಕ್ಕಿ ಹರಿದಿದ್ದಷ್ಟೇ ಅಲ್ಲದೆ, ಬೆಂಕಿಯ ಜ್ವಾಲೆ ಕಾಣಿಸಿಕೊಂಡು ದೊಡ್ಡ ಸುದ್ದಿಯಾಗಿತ್ತು. ಆಗ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಮಂಡಳಿಯು ರಾಜ್ಯ ಸರ್ಕಾರದ 5 ಇಲಾಖೆಗಳಿಗೆ ನಿರ್ದೇಶನ ನೀಡಿದೆ. ತಮ್ಮ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಅರಣ್ಯ ಮತ್ತು ಪರಿಸರ ಇಲಾಖೆ ಈ ನಿಟ್ಟಿನಲ್ಲಿ ಮಾಲಿನ್ಯ ತಡೆಗೆ ತನ್ನ ಪಾಲಿನ ಕರ್ತವ್ಯವನ್ನು ಯಾವುದೇ ಲೋಪಕ್ಕೆ ಆಸ್ಪದವಿಲ್ಲದಂತೆ ನಿರ್ವಹಿಸಬೇಕು. ಯಾರೇ ಕೆರೆಗೆ ತ್ಯಾಜ್ಯ ತಂದು ಸುರಿದರೆ, ರಾಸಾಯನಿಕ ಮತ್ತು ಸಂಸ್ಕರಿಸದ ತ್ಯಾಜ್ಯವನ್ನು ನೇರವಾಗಿ ಹರಿಯಬಿಟ್ಟರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಸೂಚಿಸಿದರು.. ಬೆಂಗಳೂರಿನ ಯಾವುದೇ ಕೆರೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು, ಕೆರೆಯಲ್ಲಿ ತ್ಯಾಜ್ಯ ಸುರಿಯದಂತೆ ನೋಡಿಕೊಳ್ಳಬೇಕು ಎಂದರು.

ರಾತ್ರಿಯ ವೇಳೆ ಮಾತ್ರ ಕೊಳಚೆ ಸ್ಥಳಾಂತರಿಸುವುಜು ಸೂಕ್ತ ಎಂಬ ಅಭಿಪ್ರಾಯವಿದೆ. ಹೀಗಾಗಿ ಹೆಚ್ಚುವರಿ ವಾಹನ ಬಳಕೆ ಮಾಡಿ ಕಾಮಗಾರಿ ಶೀಘ್ರ ಮುಗಿಸಿ, ಕೆರೆ ಪುನಶ್ಚೇತನ ಮಾಡಿದರೆ ಒಳಿತಾಗುತ್ತದೆ ಎಂದರು. ಹೊಸ ಎಸ್.ಟಿ.ಪಿ.ಗಳ ನಿರ್ಮಾಣದ ಜೊತೆಗೆ ಹಳೆಯ 5 ಎಸ್.ಟಿ.ಪಿ.ಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದೆ. ಮುಂದಿನ 10 ವರ್ಷಗಳ ಅವಧಿಗೆ ಅಗತ್ಯವಾದ ಎಸ್.ಟಿ.ಪಿ.ಗಳ ನಿರ್ಮಾಣವೂ ಆಗಬೇಕು. ಕೆಲಸ ಅರ್ಧಕ್ಕೆ ನಿಂತರೆ ಮಾಡಿದ ಹಣವೂ ವ್ಯರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನೋಟಿಸ್ ಜಾರಿ: ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ಮಗು ಮೃತಪಟ್ಟು ಹಲವರು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಜೀವ ಜಲ ವಿಷವಾದರೆ ಬದುಕುವುದು ಹೇಗೆ. ಇಂತಹ ನಿರ್ಲಕ್ಷ್ಯ ತಾಳುವ ಅಧಿಕಾರಿ ಎಷ್ಟೇ ದೊಡ್ಡವರಾದರೂ, ಪ್ರಭಾವಿಯಾದರೂ ಅವರ ವಿರುದ್ಧ  ಕಠಿಣ ಕ್ರಮ ಜರುಗಿಸಲಾಗುವುದು ಎಂದೂ ತಿಳಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ವಿಜಯ ಮೋಹನ್ ರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಿಂದಿನ ಲೇಖನಜೂನ್ – ಡಿಸೆಂಬರ್: ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ಮಾಹಿತಿ ಇಲ್ಲಿದೆ
ಮುಂದಿನ ಲೇಖನಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ:ಓರ್ವ ಸಾವು