ಮನೆ ರಾಜ್ಯ “ದೇವರ ಆಶೀರ್ವಾದವಿದೆ, ಯಾರು ಏನೂ ಮಾಡಲಾಗಲ್ಲ” : ರಾಯಚೂರಲ್ಲಿ ರೇವಣ್ಣ ಪ್ರತಿಕ್ರಿಯೆ

“ದೇವರ ಆಶೀರ್ವಾದವಿದೆ, ಯಾರು ಏನೂ ಮಾಡಲಾಗಲ್ಲ” : ರಾಯಚೂರಲ್ಲಿ ರೇವಣ್ಣ ಪ್ರತಿಕ್ರಿಯೆ

0

ರಾಯಚೂರು: ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ. ರೇವಣ್ಣ ತಮ್ಮ ರಾಜಕೀಯ ಬದುಕಿನಲ್ಲಿ ಎದುರಾಗುತ್ತಿರುವ ಸವಾಲುಗಳ ಬಗ್ಗೆ ತಾವು ದೇವರ ಶಕ್ತಿಯ ಮೇಲೆ ಪೂರ್ಣ ನಂಬಿಕೆಯಿಂದ ನಿರಂತರವಾಗಿ ಮುಂದೆ ಸಾಗುತ್ತಿರುವುದಾಗಿ ಸ್ಪಷ್ಟ ಸಂದೇಶ ನೀಡಿದ್ದಾರೆ. ದೈವ ಶಕ್ತಿ ಮತ್ತು ಜನ ಶಕ್ತಿ ಇರೋವರೆಗೆ ಯಾರೂ ನನ್ನನ್ನು ಕಾಡಲು ಆಗುವುದಿಲ್ಲ ಎಂದು ಭರವಸೆಯಿಂದ ಹೇಳಿದರು.

ರಾಯಚೂರಿನಿಂದ ಮಂತ್ರಾಲಯದ ಕಡೆಗೆ ಹೊರಡುತ್ತಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ತಮ್ಮ ಧಾರ್ಮಿಕ ನಂಬಿಕೆ ಹಾಗೂ ಇತ್ತೀಚಿನ ಧಾರ್ಮಿಕ ಪ್ರವಾಸಗಳ ಕುರಿತು ವಿವರಿಸಿದರು. ನಾನು ದೇವಸ್ಥಾನಕ್ಕೆ ಸಾಮಾನ್ಯವಾಗಿ ಹೋಗುತ್ತೇನೆ. ಹಾಗಾಗಿ ಮಂತ್ರಾಲಯಕ್ಕೆ ಹೋಗಲು ಬಂದಿದ್ದೇನೆ. ಮೊನ್ನೆ ತಿರುಪತಿಗೆ ಹೋಗಿದ್ದೆ ನಮ್ಮ ತಂದೆ ಜೊತೆ. ಶೃಂಗೇರಿಗೂ ಹೋಗಿದ್ದೆ ಎಂದಿದ್ದಾರೆ. ದೇವರ ಆಶೀರ್ವಾದದಿಂದಲೇ ನಾವು ಯಾವ ಸಂಕಟವನ್ನಾದರೂ ಜಯಿಸಬಹುದು ಎಂಬ ನಂಬಿಕೆಯಲ್ಲಿ ಮುನ್ನಡೆಯುತ್ತಿದ್ದೇನೆ.

ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಏನನ್ನೂ ಹೇಳುವ ಶಕ್ತಿ ಇಲ್ಲ. ಕಾಂಗ್ರೆಸ್‍ಗೆ ರಾಜ್ಯದ ಜನತೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಏನು ಮಾಡ್ತಾರೆ ಅಂತ ನೋಡೋಣ, ಈಗಾಗ್ಲೆ ಐದನೇ ಗ್ಯಾರಂಟಿ, ಆರನೇ ಗ್ಯಾರಂಟಿ, ಏಳನೇ ಗ್ಯಾರಂಟಿ ಅಂತ ಹೇಳ್ತಿದ್ದಾರೆ. ಮಳೆಯಿಂದ ಬೆಳೆ ಹಲವೆಡೆ ನಾಶ ಆಗಿದೆ, ಸರ್ಕಾರ ಬೆಳೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಮಳೆ ಅವಾಂತರ ಲೆಕ್ಕಿಸದೇ ಕಾಂಗ್ರೆಸ್ ಸಮಾವೇಶ ನಡೆಸಿದೆ. ಈ ವಿಚಾರವನ್ನು ರಾಜ್ಯದ ಜನತೆಗೆ ಬಿಡ್ತೀವಿ, ಸರ್ಕಾರ ಎರಡು ವರ್ಷ ಏನು ಕೆಲಸ ಮಾಡಿದೆ ಅನ್ನೋದನ್ನ ರಾಜ್ಯದ ಜನತೆ ನಿರ್ಧಾರ ಮಾಡ್ತಾರೆ. ಕಾಲವೇ ಇದನ್ನೆಲ್ಲ ನಿರ್ಧರಿಸುತ್ತೆ.