ಪಶ್ಚಿಮ ಟರ್ಕಿಯ ಬಲಿಕೇಸಿರ್ ಪ್ರಾಂತ್ಯದ ಸಿಂದಿರ್ಗಿ ಪಟ್ಟಣದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮ ಕಟ್ಟಡಗಳು ನೆಲಸಮಗೊಂಡಿವೆ. ಪಶ್ಚಿಮ ಟರ್ಕಿಯಲ್ಲಿ ಸಂಭವಿಸಿದ್ದ ಭೂಕಂಪದಿಂದಾಗಿ ಮೂರು ಕಟ್ಟಡಗಳು ನೆಲಸಮಗೊಂಡಿದ್ದು, ಜನರು ಭಯದಿಂದ ಮನೆಯಿಂದಾಚೆ ಓಡಿಹೋಗಿದ್ದಾರೆ.
ಕಳೆದ ಬಾರಿ ಸಂಭವಿಸಿದ್ದ ಭೂಕಂಪದಿಂದಾಗಿ ದುರ್ಬಲಗೊಂಡಿದ್ದ ಮೂರು ಕಟ್ಟಡಗಳು ಹಾಗೂ ಎರಡು ಅಂತಸ್ತಿನ ಅಂಗಡಿ ನೆಲಸಮಗೊಂಡಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿಗಳ ಪ್ರಕಾರ, ಬಾಲಿಕೇಸಿರ್ ಪ್ರಾಂತ್ಯದ ಸಿಂದಿರ್ಗಿ ಪಟ್ಟಣದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಸ್ಥಳೀಯ ಸಮಯ ರಾತ್ರಿ 10:48ರ ಸುಮಾರಿಗೆ ಸುಮಾರು 6 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಇಸ್ತಾನ್‌ಬುಲ್, ಬುರ್ಸಾ, ಮನಿಸಾ, ಇಜ್ಮಿರ್ ಸೇರಿದಂತೆ ಹತ್ತಿರದ ಪ್ರಾಂತ್ಯಗಳಲ್ಲಿ ಭೂಮಿ ಕಂಪಿಸಿದೆ.















