ಮನೆ ರಾಜ್ಯ ಅವೈಜ್ಞಾನಿಕ ಪರಿಷ್ಕಣೆ ವಿರೋಧಿಸಿ ವಿದ್ಯಾರ್ಥಿ, ಜನಾಂದೋಲನ ರೂಪಿಸುತ್ತಿದ್ದೇವೆ: ಕಾಗೇರಿ

ಅವೈಜ್ಞಾನಿಕ ಪರಿಷ್ಕಣೆ ವಿರೋಧಿಸಿ ವಿದ್ಯಾರ್ಥಿ, ಜನಾಂದೋಲನ ರೂಪಿಸುತ್ತಿದ್ದೇವೆ: ಕಾಗೇರಿ

0

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಪಂಥೀಯ ಬುದ್ದಿಜೀವಿಗಳ ಕಪಿಮುಷ್ಠಿಯಲ್ಲಿದ್ದಾರೆ. ಹೀಗಾಗಿಯೇ ಬೇಕಾಬಿಟ್ಟಿಯಾಗಿ ಪುಠ್ಯ ಪುಸ್ತಕ ಪರಿಷ್ಕರಣೆಯಾಗುತ್ತಿದೆ. ಇಂತಹ ಅವೈಜ್ಞಾನಿಕ ಪರಿಷ್ಕಣೆ ವಿರೋಧಿಸಿ ವಿದ್ಯಾರ್ಥಿ, ಜನಾಂದೋಲನ ರೂಪಿಸುತ್ತಿದ್ದೇವೆ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಬದಲಾವಣೆ ಮಾಡಿದ್ದೇನೆ. ಆದರೆ ಅದಕ್ಕೊಂದು ಸಮಿತಿ ರಚಿಸಿ, ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರಕಾರ ಯಾವುದೇ ಸಮಿತಿ, ಶಿಕ್ಷಣ ತಜ್ಞರ ಅಭಿಪ್ರಾಯವಿಲ್ಲದೆ ಕೇವಲ ರಾಜಕಾರಣಕ್ಕಾಗಿಯೇ ಪರಿಷ್ಕರಿಸಿದೆ‌. ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಅಭಿಪ್ರಾಯ ಪಡೆಯದೆ ಎಲ್ಲರನ್ನೂ ಗೊಂದಕ್ಕೀಡು ಮಾಡಿದ್ದಾರೆ. ತಮ್ಮ ರಾಜಕೀಯ ಅಜೆಂಡಕ್ಕಾಗಿ ಶಿಕ್ಷಣ ಕ್ಷೇತ್ರದ ದುರ್ಬಳಕೆ ಸರಿಯಲ್ಲ. ಇದನ್ನು ವಿರೋಧಿಸಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಸಂಸ್ಥೆ ಮೂಲಕ ಆಂದೋಲನ ರೂಪಿಸಲಾಗುತ್ತಿದೆ ಎಂದರು.

ಎನ್.ಇ.ಪಿ ಅನುಷ್ಠಾನದಲ್ಲಿ ರಾಜ್ಯ ಮೊದಲ‌ ಸ್ಥಾನದಲ್ಲಿತ್ತು. ಆದರೆ ಕಾಂಗ್ರೆಸ್ ಸರಕಾರ ಅದನ್ನು ಕೈಬಿಟ್ಟು ಎಸ್.ಇ.ಪಿ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯಲ್ಲ. ಮಾಡುವುದಿದ್ದರೆ ಕಾಂಗ್ರೆಸ್ ಸಚಿವರ, ಶಾಸಕರ ಒಡೆತನದಲ್ಲಿರುವ ಶಾಲೆಗಳಲ್ಲಿ ಆರಂಭಿಸಲಿ. ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿ ಚಿಂತನೆ, ರಾಷ್ಟ್ರೀಯಯತೆ, ಭಾವೈಕ್ಯತೆ ವಿಚಾರಗಳನ್ನು ತಿಳಿಸುವ ಬದಲು ಗುಲಾಮತನದ ಮಾನಸಿಕತೆ ಬೆಳೆಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ರಾಜ್ಯ ಸರಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ‌ ಶಾಂತಿ ಕದಡಿದ ಡಿಜೆ ಹಳ್ಳಿ, ಕೆಜಿ ಹಳ್ಳಿ, ಹಳೇ ಹುಬ್ಬಳ್ಳಿಯ ಸೇರಿದಂತೆ ಇಂತಹ ಪ್ರಕರಣಗಳನ್ನು ವಾಪಸ್ಸು ಪಡೆಯಲು ಪತ್ರ ಬರೆಯುವುದು, ಪೊಲೀಸರಿಗೆ ಒಂದು ಕೋಮಿನ ರಕ್ಷಣೆ ಮಾಡುವಂತೆ ಸಂದೇಶ ನೀಡಲಾಗುತ್ತಿದೆ. ವರ್ಗಾವಣೆ ದಂಧೆ ಮಿತಿಮೀರಿದೆ. ವೈಫಲ್ಯಗಳು ಮುನ್ನೆಲೆಗೆ ಬಂದಾಗ ಇನ್ನೊಂದು ಘಟನೆ ಸೃಷ್ಟಿಸುವ ಕೆಲಸ ಸರಕಾರದಿಂದ ನಡೆಯುತ್ತಿದೆ. ಕಾವೇರಿ ವಿಚಾರ ಇರುವಾಗ ಶಿವಮೊಗ್ಗ ಘಟನೆ ನಡೆಯಿತು. ರಾಜ್ಯ ಗಂಭೀರ ಸ್ಥಿತಿಗೆ ಹೋಗುತ್ತಿದೆ. ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಯಾವ ಸಚಿವರಿಗೂ ಗಂಭೀರತೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕನ್ನಡದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ  ಸಾಮಾಜಿಕ ಜಾಲತಾಣದಲ್ಲಿ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.