ಮನೆ ಕಾನೂನು ಮದುವೆಯ ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎನ್ನುವ ಪ್ರಕರಣಗಳಲ್ಲಿ ಸಂಬಂಧದ ಅವಧಿಯನ್ನೂ ಪರಿಗಣಿಸಬೇಕು: ಹೈಕೋರ್ಟ್

ಮದುವೆಯ ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎನ್ನುವ ಪ್ರಕರಣಗಳಲ್ಲಿ ಸಂಬಂಧದ ಅವಧಿಯನ್ನೂ ಪರಿಗಣಿಸಬೇಕು: ಹೈಕೋರ್ಟ್

0

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎನ್ನುವ ಪ್ರಕರಣಗಳಲ್ಲಿ ಸಂತ್ರಸ್ತೆ ಹಾಗೂ ಆರೋಪಿ ನಡುವಿನ ಸಂಬಂಧದ ಅವಧಿಯನ್ನೂ ಪರಿಗಣಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮದುವೆಯ ಭರವಸೆ ನೀಡಿ ಐದು ವರ್ಷಕ್ಕೂ ಅಧಿಕ ಸಮಯ ಲೈಂಗಿಕ ಸಂಪರ್ಕ ಬೆಳಸಿದ ಆರೋಪ ಕುರಿತಾದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ, ಮಹಿಳೆಯ ಘನತೆಗೆ ಧಕ್ಕೆ ತಂದಿರುವುದು, ನಂಬಿಕೆ ದ್ರೋಹ ಮತ್ತು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಪ್ರಕರಣವನ್ನು ಅದು ರದ್ದುಪಡಿಸಿದೆ.

ಪ್ರಕರಣದಲ್ಲಿ ತನ್ನ ವಿರುದ್ಧ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಅತ್ಯಾಚಾರ ಪ್ರಕರಣ ರದ್ದುಕೋರಿ ಮಲ್ಲಿಕಾರ್ಜುನ ದೇಸಾಯಿ ಗೌಡರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಒಪ್ಪಿತ ಲೈಂಗಿಕ ಕ್ರಿಯೆಯಾದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು. ಆದ್ದರಿಂದ ಅತ್ಯಾಚಾರ ಆರೋಪ ದುರ್ಬಲವಾಗಲಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ಇದೇ ವೇಳೆ ಮಹಿಳೆ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಹಾಗೂ ಜೀವ ಬೆದರಿಕೆ ಒಡ್ಡಿದ ದೋಷಾರೋಪದ ಕುರಿತು ಸಂಬಂಧಪಟ್ಟ ನ್ಯಾಯಾಲಯವು ಅರ್ಜಿದಾರರ ವಿರುದ್ಧದ ಕಾನೂನು ಪ್ರಕ್ರಿಯೆ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಅರ್ಜಿದಾರ ಆರೋಪಿ ಮತ್ತು ಸಂತ್ರಸ್ತೆ ಪರಿಚಿತರಾಗಿದ್ದರು. ನಂತರ ಪರಿಚಯವು ಪ್ರೀತಿಗೆ ತಿರುಗಿ, ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು. ಆದರೆ, ಇಬ್ಬರ ನಡುವೆ ಸಂಬಂಧ ಹಳಿಸಿದ ಬಳಿಕ ಸಂತ್ರಸ್ತೆಯು ತನ್ನ ವಿರುದ್ಧ ಪೊಲೀಸರಿಗೆ ಅತ್ಯಾಚಾರದ ದೂರನ್ನು ನೀಡಿದ್ದಾರೆ ಎನ್ನುವುದು ಅರ್ಜಿದಾರರು ವಾದವಾಗಿತ್ತು.

ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ್ದ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಪೀಠವು, ದೂರಿನಲ್ಲಿ ಉಲ್ಲೇಖಿಸಿರುವಂತೆ ಆರೋಪಿ ಮತ್ತು ಸಂತ್ರಸ್ತೆ ಕಳೆದ 12 ವರ್ಷಗಳಿಂದ ಪರಿಚಿತರು. ಇಬ್ಬರು ನಡುವೆ ಪ್ರೀತಿಯಿತ್ತು. ನಂತರ ದೈಹಿಕ ಸಂಪರ್ಕ ಬೆಳೆದಿದೆ. ಅದಕ್ಕೆ ಸಂತ್ರಸ್ತೆ ಒಂದೆರಡಲ್ಲ ಸುಮಾರು ಐದು ವರ್ಷದವರಗೆ ಒಪ್ಪಿಗೆ ನೀಡಿದ್ದಾರೆ. ಇಷ್ಟು ಸುದೀರ್ಘ ಅವಧಿಯವರೆಗೆ ಆರೋಪಿಯು ಸಂತ್ರಸ್ತೆಯ ಮೇಲೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಪ್ರಕರಣದಲ್ಲಿ ಸಂತ್ರಸ್ತೆಯ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ಬೆಳೆದಿದೆ ಎಂಬುದು ತಿಳಿಯುತ್ತದೆ. ಒಪ್ಪಿತ ಲೈಂಗಿಕ ಕ್ರಿಯೆಯಾದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು. ಆದ್ದರಿಂದ ಅತ್ಯಾಚಾರ ಆರೋಪ ದುರ್ಬಲವಾಗಲಿದೆ ಎಂದು ಪೀಠವು ಅಭಿಪ್ರಾಯಪಟ್ಟು ಈ ಕುರಿತ ಆರೋಪಗಳನ್ನು ಕೈಬಿಟ್ಟಿತು.

ಹಿಂದಿನ ಲೇಖನಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಆರ್​.ಧ್ರುವನಾರಾಯಣ ನಿಧನ: ಸಿಎಂ ಸೇರಿದಂತೆ ಗಣ್ಯರ ಸಂತಾಪ