ಚೆನ್ನೈ: ಕಾಲಿವುಡ್ ನಟ ಕಾರ್ತಿ ಅವರ ʼಸರ್ದಾರ್ -2ʼ ಚಿತ್ರೀಕರಣದ ಸೆಟ್ ನಲ್ಲಿ ಅವಘಡ ಸಂಭವಿಸಿ ಸ್ಟಂಟ್ ಮ್ಯಾನ್ ಮೃತಪಟ್ಟಿರುವ ಘಟನೆ ನಡೆದಿದೆ.
ಪಿಎಸ್ ಮಿತ್ರನ್ ನಿರ್ದೇಶನದ ‘ಸರ್ದಾರ್ 2’ ಸೆಟ್‌ನಲ್ಲಿ ಸಂಭವಿಸಿದ ಅವಘಡದಲ್ಲಿ ಎಜುಮಲೈ (54) ಎಂಬ ಸ್ಟಂಟ್ ಮ್ಯಾನ್ ಮೃತಪಟ್ಟಿರುವುದು ವರದಿಯಾಗಿದೆ.
ಜುಲೈ 15ರಂದು ಚೆನ್ನೈನ ಸಾಲಿಗ್ರಾಮಂದಲ್ಲಿರುವ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ʼಸರ್ದಾರ್ -2ʼ ಚಿತ್ರೀಕರಣವನ್ನು ಆರಂಭಿಸಲಾಗಿತ್ತು. ಸಿನಿಮಾದ ಸಾಹಸ ದೃಶ್ಯವನ್ನು ಚಿತ್ರೀಕರಿಸುವ ವೇಳೆ 20 ಅಡಿಯಿಂದ ಎಜುಮಲೈ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಆದರೆ ಬುಧವಾರ(ಜು.17ರಂದು) ಮಧ್ಯರಾತ್ರಿ 1:30ರ ವೇಳೆಗೆ ತೀವ್ರ ರಕ್ತಸ್ರಾವವಾಗಿ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಅಪಘಾತದ ಬಗ್ಗೆ ವಿರುಗಂಬಕ್ಕಂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಭಾರೀ ನಿರೀಕ್ಷೆ ಹುಟ್ಟಿಸಿರುವ ಕಾರ್ತಿ ಅವರ ʼಸರ್ದಾರ್ -2ʼ ಸಿನಿಮಾದ ಮುಹೂರ್ತ ಜುಲೈ 12ರಂದು ನೆರವೇರಿತ್ತು. ಕಾರ್ತಿ ಸೇರಿದಂತೆ ಚಿತ್ರತಂಡದ ಪ್ರಮುಖರು ಭಾಗಿಯಾಗಿದ್ದರು.
2022ರಲ್ಲಿ ಬಂದ ಸ್ಪೈ ಥ್ರಿಲ್ಲರ್ ʼಸರ್ದಾರ್ʼ ಕಾಲಿವುಡ್ ನಲ್ಲಿ ಪ್ರಶಂಸೆ ಪಡೆದಿತ್ತು.















