ಮನೆ ಕ್ರೀಡೆ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿ: ಡಾ. ಕೆ ವಿ ರಾಜೇಂದ್ರ

ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿ: ಡಾ. ಕೆ ವಿ ರಾಜೇಂದ್ರ

0

ಮೈಸೂರು(Mysore): ರಾಜ್ಯ ಮಟ್ಟದ 2022-23 ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದ್ದು, ತಮಗೆ ಸಿಕ್ಕಿರುವ ಜವಬ್ದಾರಿಯನ್ನು ಬದ್ದತೆಯಿಂದ ನಿರ್ವಹಿಸಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಸೂಚಿಸಿದರು.

 ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ 2022-23 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2 ವರ್ಷದ ಕೊರೋನಾ ನಂತರದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸುತ್ತಿದ್ದು, ಎಲ್ಲಾ ಕ್ರೀಡಾಪಟುಗಳ/ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ವ್ಯವಸ್ಥೆಗಳನ್ನು ರೂಪಿಸಿ ಎಂದು ತಿಳಿಸಿದರು.

 ಪ್ರತಿಯೊಬ್ಬ ಕ್ರೀಡಾಪಟುವಿಗೂ ಉತ್ತಮ ವಸತಿ ಸೌಲಭ್ಯ ಕಲ್ಪಿಸಿ. ಅವರಿಗೆ ನೀಡಿರುವ ವಸತಿ ಸ್ಥಳದಿಂದ ಕ್ರೀಡಾಂಗಣಕ್ಕೆ ಶಾಲಾ ಬಸ್ ವ್ಯವಸ್ಥೆ ಮಾಡಬೇಕು. ಒಂದು ಜಿಲ್ಲೆಯ ಮಕ್ಕಳಿಗೆ ಮೂರು ಜನ ಅಧಿಕಾರಿಗಳನ್ನು ನೇಮಿಸಿ ಕ್ರೀಡಾಕೂಟ ಮುಗಿಯುವವರೆಗೆ ಅವರ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು. ಹೊರಗಿನಿಂದ ಬರುವ ಕ್ರೀಡಾಪಟುಗಳು ಮೈಸೂರಿನ ಕೆಲವು ಸ್ಥಳಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಿ ಎಂದರು.

 ಕ್ರೀಡಾಂಗಣದಲ್ಲಿ ಮೊಬೈಲ್ ಟಾಯ್ಲೆಟ್ಸ್ ವ್ಯವಸ್ಥೆ ಮಾಡಬೇಕು. ಪೊಲೀಸ್ ಸಿಬ್ಬಂದಿಗಳು ಸಂಪೂರ್ಣ ಕ್ರೀಡಾಕೂಟದ ಭದ್ರತೆಯನ್ನು ವಹಿಸಬೇಕು. ವೈದ್ಯಕೀಯ ವ್ಯವಸ್ಥೆ ಬಹಳ ಮುಖ್ಯವಾಗಿದ್ದು ಅದಕ್ಕಾಗಿ ಕ್ರೀಡಾಂಗಣದಲ್ಲಿ ಸದಾ ಸಿದ್ಧವಿರುವಂತೆ ಒಂದು ವೈದ್ಯರ ತಂಡವನ್ನು ನೇಮಿಸಿ ಮತ್ತು ಆಂಬುಲೆನ್ಸ್ ಸೌಲಭ್ಯ ಒದಗಿಸಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

 ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಜೇಂದ್ರ ಅರಸ್ ಅವರು ಮಾತನಾಡಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮಟ್ಟದಲ್ಲಿ ಸ್ಪರ್ಧೆಗಳು ನಡೆಯಲಿದ್ದು, 4608 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಾಥಮಿಕ ಶಾಲಾ ಮಕ್ಕಳಿಗೆ 10 ಸ್ಪರ್ಧೆಗಳು ಮತ್ತು ಪ್ರೌಢಶಾಲಾ ಮಕ್ಕಳಿಗೆ 19 ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.

 ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪ್ರಸಾದ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಜೆಡಿಎಸ್’ನವರಿಗೆ ಅಮಿತ್ ಶಾ ಕಂಡರೆ ಭಯ: ಎಸ್.ಟಿ.ಸೋಮಶೇಖರ್
ಮುಂದಿನ ಲೇಖನಭಜಿಸಿ ಬದುಕೆಲೋ ಮಾನವಾ,