ಮನೆ ಸ್ಥಳೀಯ ವಿದ್ಯಾರ್ಥಿಗಳಿಗೆ ಈ ರೀತಿಯ ವಿಚಾರ ಸಂಕಿರಣಗಳನ್ನು ಪ್ರತೀ ವರ್ಷವೂ ಆಯೋಜಿಸಬೇಕು: ಕೆ.ಹರೀಶ್ ಗೌಡ

ವಿದ್ಯಾರ್ಥಿಗಳಿಗೆ ಈ ರೀತಿಯ ವಿಚಾರ ಸಂಕಿರಣಗಳನ್ನು ಪ್ರತೀ ವರ್ಷವೂ ಆಯೋಜಿಸಬೇಕು: ಕೆ.ಹರೀಶ್ ಗೌಡ

0

ಮೈಸೂರು: ರಾಜ್ಯ ಪತ್ರಾಗಾರ ಇಲಾಖೆಯ ಏಕೀಕರಣ ಕಾರ್ಯಕ್ರಮವು ಇಂದಿಗೆ ಸೀಮಿತವಾಗಿರದೆ, ಪ್ರತೀ ವರ್ಷವು ಆಯೋಜಿಸಿ ವಿದ್ಯಾರ್ಥಿಗಳಿಗೆ ವಿಷಯಗಳ ಬಗ್ಗೆ ಅರಿವು ಮೂಡುವಂತೆ ಮಾಡಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಸಲಹೆ ನೀಡಿದರು.

ಇಂದು ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ-50 ಹಾಗೂ ಕರ್ನಾಟಕ ನಾಮಕರಣ 50 ರ ಸಂಭ್ರಮಾಚರಣೆ ಮಹೋತ್ಸವ ಅಂಗವಾಗಿ ನಡೆದ `ಕರ್ನಾಟಕ ಏಕೀಕರಣ ಮತ್ತು ಕನ್ನಡ ಅಸ್ಮಿತೆ’ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಮತ್ತು ಚಾರಿತ್ರಿಕ ದಾಖಲೆಗಳ ಹಾಗೂ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಪತ್ರಾಗಾರ ಇಲಾಯುೆ ಇತಿಹಾಸ ತಿಳಿಸುವುದರ ಜೊತೆಗೆ ಎಲ್ಲಾ ರೀತಿಯ ದೇಶದ, ರಾಜ್ಯದ, ನಗರದ, ಭೂಮಿ, ಜಲ ಇತ್ಯಾದಿಗಳಿಗೆ ಸಂಬoಧಿಸಿದ ಎಲ್ಲಾ ರೀತಿಯ ದಾಖಲೆಗಳನ್ನು ಸಂರಕ್ಷಣೆ ಮಾಡುವುದರ ಮೂಲಕ ಮುಖ್ಯವಾಗಿ ಬೇಕಾಗಿರುವ ಮಾಹಿತಿಗಳು ಸುಲಭವಾಗಿ ದೊರಕುವಂತೆ ಮಾಡಿದೆ ಎಂದರು.

ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ರವರು ಮಾತನಾಡಿ ಈ ರೀತಿಯ ವಿಚಾರ ಸಂಕೀರಣಗಳಿoದ ಹಲವಾರು ದಾಖಲೆಗಳ ಬಗ್ಗೆ ಮಾಹಿತಿ ಪಡೆಯಲು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ. ನಮ್ಮ ನಾಡಿನ ವಿವಿಧ ಸಂಸ್ಕೃತಿ, ಭಾಷೆ, ವಿಷಯಗಳು, ಬರವಣಿಗೆ ಒಟ್ಟಾರೆಯಾಗಿ ನಮ್ಮ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು, ಕಾಲ ಕಾಲಕ್ಕೆ ಬಿಡುಗಡೆಯಾದ ದಾಖಲೆಗಳನ್ನು ಸಂಗ್ರಹಿಸಿರುವ ಮೂಲಕ ಇಲಾಖೆಯು ಮಹತ್ವದ ಕೆಲಸವನ್ನು ಮಾಡುತ್ತಿದೆ ಎಂದರು.

ಯಾವುದೇ ಒಬ್ಬ ಸಂಶೋಧಕನು ಸಂಶೋಧನೆ ಮಾಡಲು ಪತ್ರಾಗಾರ ಇಲಾಖೆ ಕಲೆ ಹಾಕಿರುವ ಮಾಹಿತಿಗಳು ಬಹಳ ಪೂರಕವಾಗಿ ಸಹಕಾರ ನೀಡುತ್ತವೆ. ಇದರಲ್ಲಿ ನಾವು ಎಂದೂ ಓದದ, ನೋಡದ ದಾಖಲೆಗಳನ್ನು ಕಾಣಬಹುದು. ಪ್ರತಿಯೊಬ್ಬ ವ್ಯಕ್ತಿಯು ಇಲಾಖೆಯಲ್ಲಿರುವ ದಾಖಲೆ ಮಾಹಿತಿಗಳನ್ನು ಓದಿದಾಗ ನಮ್ಮ ಜ್ಞಾನದಲ್ಲಿ ವಿಕಾಸವಾಗುತ್ತದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕರಾದ ಡಾ.ಗವಿಸಿದ್ದಯ್ಯ ರವರು ಮಾತನಾಡಿ ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಚಾರಿತ್ರಿಕ ದಾಖಲೆಗಳನ್ನು ಸಂಸ್ಕರಿಸಿ ಅದನ್ನು ಜನರಿಗೆ ತಲುಪಿಸುವುದೇ ಪತ್ರಾಗಾರ ಇಲಾಖೆಯ ಮುಖ್ಯ ಉದ್ದೇಶ. ಇಲಾಖೆಯಲ್ಲಿ ಇತಿಹಾಸಕ್ಕೆ ಸಂಬoಧಿಸಿದ ಹಲವಾರು ದಾಖಲೆಗಳನ್ನು ವಿಷೇಶವಾಗಿ ಮೈಸೂರಿನ ಇತಿಹಾಸದ ಬಗ್ಗೆ ತಿಳಿಸುವ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಸಾರ್ವಜನಿಕರು ಅದರಲ್ಲೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ ಅವರು ಮಾತನಾಡಿ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಅರಿಯಲು ಇದು ಉತ್ತಮ ಸಮಯ. ನಮ್ಮ ಹಿರಿಯರು, ಹಲವಾರು ದಿಗ್ಗಜರು ಈಗಾಗಲೇ ಕನ್ನಡ ದೀಪವನ್ನು ಹಚ್ಚುವ ಕೆಲಸ ಮಾಡಿದ್ದಾರೆ. ಅದನ್ನು ಧ್ವಿಗುಣಗೊಳಿಸಿ ಉಳಿಸುವುದು ನಮ್ಮ ಕರ್ತವ್ಯ. ಬೇರೆ ಭಾಷೆಯನ್ನು ದ್ವೇಷ ಮಾಡಬಾರದು ಆದರೆ ಭಾಷೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸಿ ಅದನ್ನು ಉಳಿಸಿ ಬೆಳೆಸಬೇಕು. ನಮ್ಮ ಕನ್ನಡ ಬಗ್ಗೆ ಮೊದಲು ನಮಗೆ ಹೆಮ್ಮೆ ಇರಬೇಕು. ಎಲ್ಲಾ ರೀತಿಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕರ್ನಾಟಕದಲ್ಲಿನ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು ಎಂದರು.

ಪ್ರತಿಯೊಬ್ಬರೂ ಸಹ ಇತಿಹಾಸವನ್ನು ತಿಳಿದುಕೊಳ್ಳಬೇಕು ನಮ್ಮ ನೆಲದ ಹಿನ್ನೆಲೆಯ ಬಗ್ಗೆ ನಮಗೆ ಅರಿವಿರಬೇಕು. ಈ ಕೆಲಸವನ್ನು ಪತ್ರಾಗಾರ ಇಲಾಖೆಯು ದಾಖಲೆಗಳನ್ನು ಸಂಸ್ಕರಿಸಿ ಸಂರಕ್ಷಿಸುವ ಮೂಲಕ ಸಾರ್ವಜನಿಕರು ಮಾಹಿತಿ ಪಡೆಯಲು ಸಹಾಯಕಾರಿಯಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಪತ್ರಾಗಾರ ಇಲಾಖೆಗೆ ಭೇಟಿ ನೀಡಿ ಅಲ್ಲಿರುವ ದಾಖಲೆ ಹಾಗೂ ಮಾಹಿತಿಗಳನ್ನು ತಿಳಿದುಕೊಂಡು ಅದರ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುಂಡಪ್ಪಗೌಡ, ಕಾಲೇಜು ನಿರ್ವಹಣಾ ಮಂಡಳಿ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷರಾದ ಟಿ.ನಾಗರಾಜು, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್ ಮರಿಗೌಡ ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಸಂವಿಧಾನದ ತಳಹದಿಗೆ ಧಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ 
ಮುಂದಿನ ಲೇಖನಚಾಲಕನ‌ ನಿಯಂತ್ರಣ ತಪ್ಪಿ ಕಾರು, ದ್ವಿಚಕ್ರ ವಾಹನಗಳಿಗೆ ಕಾರು ಡಿಕ್ಕಿ: ಓರ್ವನಿಗೆ ಗಾಯ