ಹುಬ್ಬಳ್ಳಿ: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಸುಮಲತಾ ಅವರಿಗೆ ನೀಡುವಂತೆ ಒತ್ತಾಯಿಸುತ್ತಿದ್ದ ಬಿಜೆಪಿಯ ಕೆ.ಸಿ. ನಾರಾಯಣಗೌಡ ಈಗ ಕಾಂಗ್ರೆಸ್ ಹೊಸ್ತಿಲಲ್ಲಿ ಇದ್ದಾರೆ. ಇದರ ಅರ್ಥ ಮುಂದೆ ಸುಮಲತಾ ಕೂಡ ಕಾಂಗ್ರೆಸ್ ಗೆ ಹೋಗಬಹುದು ಎಂದು ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಒಂದು ವೇಳೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಕಣಕ್ಕಿಳಿದರೆ ಸ್ವಾಗತಿಸುತ್ತೇವೆ. ನಾವು ಸುಮಲತಾ ವಿರುದ್ಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.
28 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕೇಳಿದ್ದೇವೆ. ಎಚ್.ಡಿ. ದೇವೇಗೌಡರ ಕುಟುಂಬದಿಂದ ಇಬ್ಬರು ಕಣಕ್ಕಿಳಿಯಬಹುದು. ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವರೇ ಅಥವಾ ಇಲ್ಲವೇ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದರು.
ತುಮಕೂರು, ಹಾಸನ, ಮಂಡ್ಯ, ಮೈಸೂರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರದ ಪೈಕಿ ಆರು ಕ್ಷೇತ್ರಗಳನ್ನು ಕೇಳಿದ್ದೇವೆ. ಬಿಜೆಪಿ ಜೊತೆಗೂಡಿ ನಾವು 28 ಲೋಕಸಭೆ ಕ್ಷೇತ್ರ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೌಡರ ಕುಟುಂಬದಿಂದ ಕುಮಾರಸ್ವಾಮಿ, ಪ್ರಜ್ವಲ್ ಇಬ್ಬರು ಅಭ್ಯರ್ಥಿಗಳು ಆಗಬಹುದು. ನಿಖಿಲ್ ರಾಜ್ಯಾದ್ಯಂತ ಪ್ರವಾಸ ಮಾಡ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ದೌರ್ಜನ್ಯ ದಬ್ಬಾಳಿಕೆ ಜಾಸ್ತಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.