ಮನೆ ರಾಜ್ಯ ಸಮಗ್ರ ಅಭಿವೃದ್ಧಿಗೆ  ಪೂರಕ ಬಜೆಟ್: ಸಚಿವ ಸಿ. ಸಿ. ಪಾಟೀಲರ ಅಭಿಮತ

ಸಮಗ್ರ ಅಭಿವೃದ್ಧಿಗೆ  ಪೂರಕ ಬಜೆಟ್: ಸಚಿವ ಸಿ. ಸಿ. ಪಾಟೀಲರ ಅಭಿಮತ

0

ಬೆಂಗಳೂರು: ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಘೋಷಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಮೂಲಮಂತ್ರದ ಆಶಯ ಇಂದು ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲೂ ಸೇರಿರುವುದರಿಂದ ದೇಶದ ಸರ್ವಾಂಗೀಣ ಪ್ರಗತಿಗೆ ಇದು ಮತ್ತಷ್ಟು ಚಾಲನೆ ನೀಡಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರು ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್’ನ್ನು ಸ್ವಾಗತಿಸಿರುವ ಸಿ.ಸಿ  ಪಾಟೀಲರು, ಬಜೆಟ್’ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳಿಂದ ಮುಖ್ಯವಾಗಿ ಬಡವರು ಮಧ್ಯಮ ವರ್ಗದವರು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನಷ್ಟು ಭಾರೀ ಪ್ರಮಾಣದ ಅನುದಾನ  ಘೋಷಿಸಿರುವುದು ನಮ್ಮ ರಾಜ್ಯದ ಬಗ್ಗೆ, ಅದರಲ್ಲಿಯೂ ಇಲ್ಲಿಯ ರೈತರ ಮೇಲಿರುವ ಕೇಂದ್ರ ಸರ್ಕಾರದ ಪ್ರೀತಿ ಮತ್ತು ಕಾಳಜಿಗೆ ನಿದರ್ಶನವಾಗಿದೆ ಎಂದು ಹರ್ಷ  ವ್ಯಕ್ತಪಡಿಸಿದ್ದಾರೆ.

ರಸ್ತೆ, ಹೆದ್ದಾರಿ, ಸಾರಿಗೆ ಸಂಪರ್ಕ  ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ 2.70 ಲಕ್ಷ  ಕೋಟಿ ರೂ. ಗಳ ಬೃಹತ್ ಪ್ರಮಾಣದ ಅನುದಾನ ಘೋಷಿಸಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಚಾರ,  ಸಂಪರ್ಕ ಕ್ರಾಂತಿಗೆ ಅನುಕೂಲವಾಗಲಿದೆ. ಬರಪೀಡಿತ ಪ್ರದೇಶಗಳಿಗೆ ನೆರವಿನ ಘೋಷಣೆ ಮತ್ತು ಮತ್ಸ್ಯ ಸಂಪದ ಯೋಜನೆಗೆ ಹೆಚ್ಚಿನ ಅನುದಾನ ಘೋಷಿಸಿರುವುದರಿಂದ ಸಹಜವಾಗಿಯೇ ನಮ್ಮ ರಾಜ್ಯದ ರೈತರಿಗೆ ಮತ್ತು ಮೀನುಗಾರರಿಗೆ ಹೆಚ್ಚಿನ ಲಾಭವಾಗಲಿದೆ.

ಬಯೋಗ್ಯಾಸ್, ಸಹಜ ಕೃಷಿ, ಅಮೃತ ಸರೋವರ್ ಮುಂತಾದ  ಯೋಜನೆಗಳಿಗೆ ಈ ಮುಂಗಡಪತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಿರುವುದರಿಂದ ನಮ್ಮ ರಾಜ್ಯದ ರೈತರಿಗೂ ಇದರಿಂದ ಹಲವು ರೀತಿಯ ಪ್ರಯೋಜನಗಳನ್ನು ನಿರೀಕ್ಷಿಸಬಹುದಾಗಿದೆ.

ಆದಾಯ ತೆರಿಗೆ ರಿಯಾಯಿತಿಯ ಪ್ರಮಾಣವನ್ನು ಹೆಚ್ಚಿಸಿರುವುದರಿಂದ    ಎಲ್ಲಾ ವರ್ಗದವರಿಗೂ ಹೆಚ್ಚಿನ ಉಳಿತಾಯವಾಗಲಿದೆ.

 ಪರಿಸರ ಸ್ನೇಹಿ ಯೋಜನೆಗಳಿಗೆ ಒತ್ತು ಕೊಟ್ಟಿರುವುದು, ಹಿರಿಯ ನಾಗರಿಕರಿಗೆ ಮತ್ತಷ್ಟು ಪ್ರೋತ್ಸಾಹಕರ  ಯೋಜನೆಗಳನ್ನು ಘೋಷಿಸಿರುವುದು, ಬ್ಯಾಂಕುಗಳ ಉನ್ನತೀಕರಣದ ಜೊತೆಗೆ ಠೇವಣಿದಾರರ ಹಿತ ರಕ್ಷಣೆಗೂ ಮುಂದಾಗಿರುವುದು, ರಾಜ್ಯಗಳಿಗೆ  ಬಡ್ಡಿ ರಹಿತ ಹೆಚ್ಚಿನ ಸಾಲ ನೀಡಿಕೆ ಈ ಮುಂತಾದ ಅನೇಕ  ಜನಪರ ಆಶಯಗಳು ಈ ಮುಂಗಡಪತ್ರದಲ್ಲಿ ಅಡಕವಾಗಿರುವುದು ಸನ್ಮಾನ್ಯ ಮೋದಿಜಿ ಅವರ ದೂರದರ್ಶಿತ್ವಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಸಿ.ಸಿ. ಪಾಟೀಲರು ವಿಶ್ಲೇಷಿಸಿದ್ದಾರೆ.

ಪ್ರಮುಖವಾಗಿ ಆರೋಗ್ಯ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟಿ, ಸಾಮಾಜಿಕ ಸಮತೋಲನ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದರಿಂದ ನಮ್ಮ ರಾಷ್ಟ್ರದ ಎಲ್ಲಾ ಕ್ಷೇತ್ರಗಳಿಗೂ ಈ ಮುಂಗಡ ಪತ್ರದಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಸಿ ಸಿ. ಪಾಟೀಲರು ಹೇಳಿದ್ದಾರೆ.

ಹಿಂದಿನ ಲೇಖನಹನೂರು: ವಿದ್ಯುತ್ ಆಘಾತದಿಂದ ಹೆಣ್ಣಾನೆ ಸಾವು
ಮುಂದಿನ ಲೇಖನಸೇನಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ವ್ಯಭಿಚಾರ ನಿರಪರಾಧೀಕರಣ ಪರಿಣಾಮ ಬೀರದು: ಸುಪ್ರೀಂ ಕೋರ್ಟ್