ಮನೆ ರಾಜಕೀಯ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವವರನ್ನು ಬೆಂಬಲಿಸಿ: ಮಲ್ಲಿಕಾರ್ಜುನ ‌ಖರ್ಗೆ

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವವರನ್ನು ಬೆಂಬಲಿಸಿ: ಮಲ್ಲಿಕಾರ್ಜುನ ‌ಖರ್ಗೆ

0

ಮೈಸೂರು (Mysuru): ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಿಸುವವರನ್ನು ಬೆಂಬಲಿಸಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ‌ಖರ್ಗೆ ಹೇಳಿದರು.

ಬೆಂಗಳೂರಿನ ಜನಮನ ಪ್ರತಿಷ್ಠಾನ ಇಲ್ಲಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಸಿದ್ದರಾಮಯ್ಯ ಆಡಳಿತ: ನೀತಿ-ನಿರ್ಧಾರ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಂವಿಧಾನಕ್ಕೆ ವಿರುದ್ಧ ಇರುವವರನ್ನು ಜನರು ಬೆಂಬಲಿಸಬಾರದು. ತತ್ವ-ಸಿದ್ಧಾಂತದ ಮೇಲೆ ರಾಜಕಾರಣ ಮಾಡುವ ಸಿದ್ದರಾಮಯ್ಯ ಅವರಂತಹ ನಾಯಕರನ್ನು ಬೆಂಬಲಿಸಬೇಕು ಎಂದರು.

ಸಿದ್ದರಾಮಯ್ಯ ಅಭಿವೃದ್ಧಿ ಪರ ಗಮನ ಕೊಟ್ಟು ಅನೇಕ ಯೋಜನೆಗಳನ್ನು ರೂಪಿಸಿದರು. ದಲಿತರಿಗೆ ಅನೇಕ ಯೋಜನೆ ರೂಪಿಸಿದರು. ಈಗ ಇರುವ ಸರ್ಕಾರವಂತೂ ಇಂತಹ ಕೆಲಸಗಳನ್ನು ಮಾಡುವುದಿಲ್ಲ. ಎಸ್‌ಸಿಪಿ ಅನುದಾನ ಒದಗಿಸಿದರು. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತಿದೆ. ಅಧಿಕಾರ ಇದ್ದಾಗ ಒಳ್ಳೆಯ ಕೆಲಸ ಮಾಡಬೇಕು. ಅದನ್ನು ಸಿದ್ದರಾಮಯ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ರಾಜ್ಯದಲ್ಲಿ ರೂಪಿಸಿದ ಅನ್ನಭಾಗ್ಯ ಯೋಜನೆಗೆ ನಮ್ಮ ಕೇಂದ್ರ ಸರ್ಕಾರದ ಕೊಡುಗೆಯೂ ಇದೆ. ಜನಪರ ಕಾರ್ಯಕ್ರಮಗಳನ್ನು ಸಮಾಜದ ಏಳಿಗೆಯ ಬದ್ಧತೆ ಇರುವವರಷ್ಟೆ ಮಾಡಲು ಸಾಧ್ಯ. ಅದನ್ನು ಸಿದ್ದರಾಮಯ್ಯ ಮಾಡಿದರು.

ಮನಸ್ಸಿದ್ದರೆ ಜನರಿಗಾಗಿ ಏನು ಬೇಕಾದರೂ ಮಾಡಬಹುದು. ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಪಕ್ಷ ಬೆಂಬಲ ನೀಡಿದೆ. ಸಂವಿಧಾನದ ಪ್ರಕಾರ ನಡೆದರು. ಪ್ರಜಾಪ್ರಭುತ್ವ ‌ವಿರೋಧಿ ಅಥವಾ ಸಂವಿಧಾನವಿರುದ್ಧವಾಗಿ ನಡೆದುಕೊಳ್ಳಲಿಲ್ಲ. ಹೀಗಾಗಿ ಅವರನ್ನು ಮೆಚ್ಚುತ್ತೇವೆ ಎಂದು ಖರ್ಗೆ ಹೇಳಿದರು.

ಪ್ರಜಾಪ್ರಭುತ್ವ ಉಳಿದರೆ ಯಾರು ಬೇಕಾದರೂ ಪ್ರಧಾನಿ, ಮುಖ್ಯಮಂತ್ರಿ, ರಾಷ್ಟ್ರಪತಿ ಆಗಬಹುದು. ಇಲ್ಲದಿದ್ದರೆ ಯಾರೂ ಏನೂ ಆಗಲಾಗುತ್ತಿರಲಿಲ್ಲ. ನಾವು ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಿದ್ದಕ್ಕಾಗಿ ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವುದು, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಾತ್ಯತೀತ, ಸಮಾಜವಾದ ಅಗತ್ಯವಿದೆ. ಕೆಲವೇ ಕೆಲವರ ಕೈಯಲ್ಲಿ ಅಂದರೆ 140 ಮಂದಿ ಬಳಿ ಶೇ.70ರಷ್ಟು ಸಂಪತ್ತಿದೆ. ಉಳಿದವರು ಏನು ಮಾಡಬೇಕು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸಿದ ನೆಹರೂ ತತ್ವ ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕೋರಿದರು.