ಮನೆ ಕ್ರೀಡೆ ಪ್ಯಾಲೆಸ್ತೀನಿಯರಿಗೆ ಬೆಂಬಲ: ಪಾಕ್ ವಿರುದ್ಧದ ಟೆಸ್ಟ್‌ನಲ್ಲಿ ಕಪ್ಪು ಪಟ್ಟಿ ಧರಿಸಿದ್ದ ಉಸ್ಮಾನ್ ಖವಾಜಾ ಅಂತಾರಾಷ್ಟ್ರೀಯ ಕ್ರಿಕೆಟ್...

ಪ್ಯಾಲೆಸ್ತೀನಿಯರಿಗೆ ಬೆಂಬಲ: ಪಾಕ್ ವಿರುದ್ಧದ ಟೆಸ್ಟ್‌ನಲ್ಲಿ ಕಪ್ಪು ಪಟ್ಟಿ ಧರಿಸಿದ್ದ ಉಸ್ಮಾನ್ ಖವಾಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ

0

ಸಿಡ್ನಿ: ಪ್ಯಾಲೆಸ್ತೀನಿಯರಿಗೆ ಬೆಂಬಲ ವ್ಯಕ್ತಪಡಿಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕೈಗೆ ಕಪ್ಪು ಧರಿಸಿ ಏಕಾಂಗಿಯಾಗಿ ಪ್ರತಿಭಟಿಸಿದ್ದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಸ್ರೇಲ್‌ ಹಾಗೂ ಪ್ಯಾಲೇಸ್ಟೇನ್‌ ಸಂಘರ್ಷ ಸಂಬಂಧ ಗಾಜಾದಲ್ಲಿ ನಾಗರಿಕರ ಪರ ಧ್ವನಿಯೆತ್ತದ‌ ಕಾರಣಕ್ಕೆ ಕಳೆದ ವಾರ ಐಸಿಸಿ ವಿರುದ್ಧ ಖವಾಜಾ ಸಿಡಿದೆದ್ದಿದ್ದರು. ಇದರ ಬೆನ್ನಲ್ಲೇ ಖವಾಜಾ ಅವರು ತಮ್ಮ ವಾಕ್‌ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದರು. ಇದೀಗ ಮತ್ತೆ ಪಂದ್ಯದ ವೇಳೆ ಕಪ್ಪು ಪಟ್ಟಿ ಧರಿಸಿ ಮೌನವಾಗಿ ಪ್ರತಿಭಟನೆ ನಡೆಸಿರುವುದು ಐಸಿಸಿ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಉಸ್ಮಾನ್ ಖವಾಜಾ ಅವರು ಐಸಿಸಿ ಪ್ಲೇಯಿಂಗ್ ಕಂಡೀಶನ್ಸ್ ಪುಟದಲ್ಲಿ ಬರುವ ಉಡುಪು ಮತ್ತು ಸಲಕರಣೆಗಳ ನಿಯಮಗಳ ಎಫ್ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಪಾಕಿಸ್ತಾನ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಉಸ್ಮಾನ್ ಖವಾಜಾ ಕಪ್ಪು ತೋಳಪಟ್ಟಿ ಕಟ್ಟಿ ಆಟವನ್ನು ಆಡಿದ್ದಾರೆ. ಇದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಐಸಿಸಿಯ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಉಸ್ಮಾನ್ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ವೈಯಕ್ತಿಕ ಸಂದೇಶ (ತೋಳಪಟ್ಟಿ)ವನ್ನು ಪ್ರದರ್ಶಿಸಿದ್ದಾರೆ. ಅದಕ್ಕಾಗಿ ಅವರು ಕ್ರಿಕೆಟ್ ಆಸ್ಟ್ರೇಲಿಯ ಮತ್ತು ಐಸಿಸಿಯಿಂದ ಪೂರ್ವಾನುಮತಿ ಪಡೆದಿಲ್ಲ. ‘‘ಇದು ನಿಯಮಾವಳಿಯ ಉಲ್ಲಂಘನೆಯಾಗಿದೆ. ಇಂತಹ ಮೊದಲ ಅಪರಾಧಕ್ಕೆ ಶಿಕ್ಷೆ ವಾಗ್ದಂಡನೆಯಾಗಿದೆ ಎಂದು ಐಸಿಸಿ ವಕ್ತಾರರು ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯಕ್ಕೂ ಮುನ್ನ ನಡೆದಿದ್ದ ತರಬೇತಿ ಅವಧಿ ವೇಳೆ, ಆಸೀಸ್ ಆರಂಭಿಕ ಆಟಗಾರ ಖವಾಜಾ ಅವರ ಶೂನಲ್ಲಿ ಪ್ಯಾಲೆಸ್ತೀನ್ ವಿವಾದಾತ್ಮಕ ಘೋಷವಾಕ್ಯ “ಸ್ವಾತಂತ್ರ್ಯ ಮಾನವನ ಹಕ್ಕು” ಮತ್ತು “ಎಲ್ಲರೂ ಸಮಾನರು” ಎಂಬುದಾಗಿ ಬರೆಸಿಕೊಂಡಿದ್ದರು.‌

ಗಾಜಾ ಜನರಿಗೆ ಬೆಂಬಲ ವ್ಯಕ್ತಪಡಿಸಿ ಉಸ್ಮಾನ್ ಖವಾಜಾ ಅವರು ತಮ್ಮ ಶೂ ಮೇಲೆ ಬರೆದಿರುವ ಘೋಷಣೆ ಕುರಿತು ಪ್ರತಿಕ್ರಿಯೆ ನೀಡಿದ್ದ ಕ್ರಿಕೆಟ್ ಆಸ್ಟ್ರೇಲಿಯಾ, ಆಟದ ವೇಳೆ ಐಸಿಸಿ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ತಿಳಿಸಿತ್ತು.

ಐಸಿಸಿ ನೀತಿ ಸಂಹಿತೆಯ ಪ್ರಕಾರ, ಯಾವುದೇ ಆಟಗಾರರು ಪೂರ್ವಾನುಮತಿಯಿಲ್ಲದೆ ಬಟ್ಟೆ ಅಥವಾ ತಮ್ಮ ಆಟದ ಸಲಕರಣೆಗಳ ಮೇಲೆ ಸಂದೇಶಗಳನ್ನು ಪ್ರದರ್ಶಿಸುವಂತಿಲ್ಲ. ಅದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ವಿಶೇಷವಾಗಿ ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಕಾರಣಗಳಿಗೆ ಸಂಬಂಧಿಸಿದ ಬರಹಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.