ಮನೆ Uncategorized ವೀಸಾಗಳ ಯಾದೃಚ್ಛಿಕ ಪರಿವರ್ತನೆ ನಿಲ್ಲಿಸಿ: ಎಫ್‌ಆರ್‌ಆರ್‌ಒ ಹೈಕೋರ್ಟ್ ಸೂಚನೆ

ವೀಸಾಗಳ ಯಾದೃಚ್ಛಿಕ ಪರಿವರ್ತನೆ ನಿಲ್ಲಿಸಿ: ಎಫ್‌ಆರ್‌ಆರ್‌ಒ ಹೈಕೋರ್ಟ್ ಸೂಚನೆ

0

ಬೆಂಗಳೂರು: ವೈದ್ಯಕೀಯ ದಾಖಲೆಗಳಲ್ಲಿನ ಸತ್ಯಾಂಶ ಪರಿಶೀಲನೆ ನಡೆಸದೇ ಯೆಮೆನ್ ದೇಶದ ಪ್ರಜೆಗೆ ವೀಸಾ ಅವಧಿ ವಿಸ್ತರಿಸಿದ್ದ ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವೈದ್ಯಕೀಯ ವೀಸಾ ಅವಧಿ ವಿಸ್ತರಣೆ ಮಾಡದ ಎಫ್‌ಆರ್‌ಆರ್‌ಒ ಕ್ರಮ ಪ್ರಶ್ನಿಸಿ ಯೆಮೆನ್ ದೇಶದ ಪ್ರಜೆ ಮೊಹಮ್ಮದ್ ನೋಮನ್ ಅಹ್ಮದ್ ಅಲ್ಮೇರಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿಯನ್ನೂ ವಜಾಗೊಳಿಸಿ ಆದೇಶಿಸಿದೆ.

ಮನವಿ ಸಲ್ಲಿಸಿದ ಕೂಡಲೇ ವೀಸಾ ಅವಧಿ ವಿಸ್ತರಣೆ ಮಾಡುವುದನ್ನು ಎಫ್‌ಆರ್‌ಆರ್‌ಒ ಕಚೇರಿ ಸ್ಥಗಿತಗೊಳಿಸಬೇಕು. ವೈದ್ಯಕೀಯ ವೀಸಾ ಅಥವಾ ವೈದ್ಯಕೀಯ ಪರಿಚಾರಕ ವೀಸಾ ಕೋರಿ ಆಸ್ಪತ್ರೆಗಳು ಯಾವ ಆಧಾರದಲ್ಲಿ ಶಿಫಾರಸು ಮಾಡುತ್ತಿವೆ ಎಂಬುದನ್ನು ಪರಿಶೀಲಿಸಬೇಕು. ಈ ಪ್ರಕ್ರಿಯೆಯಲ್ಲಿ ನಿಜವಾದ ಪ್ರಕರಣಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ವೈದ್ಯಕೀಯ ಪರಿಚಾರಕ ವೀಸಾವನ್ನು ದಾಖಲೆಗಳ ಅಥವಾ ಅರ್ಜಿದಾರರ ಕಾಯಿಲೆಯನ್ನು ಪರಿಶೀಲಿಸದೇ ವೈದ್ಯಕೀಯ ವೀಸಾವಾಗಿ ಪರಿವರ್ತಿಸಿರುವ ಎಫ್‌ಆರ್‌ಆರ್‌ಒ ಕ್ರಮ ಆಘಾತಕಾರಿಯಾಗಿದೆ. ವೀಸಾ ಪರಿವರ್ತನೆಗಾಗಿ ಮ್ಯಾಕ್ಸ್ ಪಥ್ ಲ್ಯಾಬ್​ನ ಕ್ಲಿನಿಕಲ್ ಪ್ರಯೋಗಾಲಯ ವರದಿ ನೀಡಿದೆ. ಅದರಲ್ಲಿ ಅರ್ಜಿದಾರರು ಕೊಲೆಸ್ಟ್ರಾಲ್ ಹಾಗೂ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. ಇದೇ ಅಂಶವನ್ನು ಪರಿಗಣಿಸಿ ವೀಸಾ ಪರಿವರ್ತನೆ ಮಾಡಲಾಗಿದ್ದು, ಎಫ್‌ಆರ್‌ಆರ್‌ಒ ಕಚೇರಿಯ ಅಧಿಕಾರಿಗಳು ದಾಖಲೆಗಳನ್ನು ಸಹ ನೋಡದೇ ವೀಸಾ ಪರಿವರ್ತಿಸಿದ್ದಾರೆ ಎಂಬುದು ತಿಳಿದುಬಂದಿದೆ, ಈ ಬೆಳವಣಿಗೆ ಮತ್ತಷ್ಟು ಆಶ್ಚರ್ಯಕರವಾಗಿದೆ ಎಂದು ತಿಳಿಸಿದೆ.

ಅರ್ಜಿದಾರರು ಹರ್ನಿಯಾದ ಶಸ್ತ್ರಚಿಕಿತ್ಸೆಗಾಗಿ ಯಾವುದೇ ಆಸ್ಪತ್ರೆಗೆ ದಾಖಲಾಗಿಲ್ಲ. ಆದ್ದರಿಂದ, ಶಸ್ತ್ರಚಿಕಿತ್ಸೆ ನಡದೇ ಇಲ್ಲ. ಆದರೆ, ಕೋವಿಡ್ ಚಿಕಿತ್ಸೆಗಾಗಿ ಒಳರೋಗಿಯಾಗಿ ಒಂದು ವಾರ ಮಾತ್ರ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದ್ದರಿಂದ ಎಫ್‌ಆರ್‌ಆರ್‌ಒ ಕಚೇರಿ ಆಸ್ಪತ್ರೆ ನೀಡಿದ ಪ್ರಮಾಣಪತ್ರಗಳ ಸತ್ಯಾಂಶ ಪರಿಶೀಲನೆಗೊಳಪಡಿಸಬೇಕು ಎಂದು ಹೇಳಿತು.

ಇದೇ ವೇಳೆ ವೀಸಾಗಳ ವಿಸ್ತರಣೆ/ಪರಿವರ್ತನೆಗಾಗಿ ಆಸ್ಪತ್ರೆಗಳು ವಿದೇಶಿಯರೊಂದಿಗೆ ಕೈಜೋಡಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರ ವಾದವನ್ನು ತಳ್ಳಿಹಾಕಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

1974ರಲ್ಲಿ ಯೆಮೆನ್​ನಲ್ಲಿ ಜನಿಸಿದ ಅಲ್ಮೇರಿ ಅವರು ತನ್ನ ದೇಶದಲ್ಲಿ ವಿವಾಹವಾಗಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ. 2013 ರಲ್ಲಿ ಮಾಸ್ಟರ್ ಆಫ್ ಸೈನ್ಸ್​​ನಲ್ಲಿ 3 ವರ್ಷಗಳ ಕೋರ್ಸ್ ಪಡೆಯುವುದಕ್ಕಾಗಿ ಭಾರತಕ್ಕೆ ಬಂದ ಅವರು, ಟಿ.ಜಾನ್ ಕಾಲೇಜ್ ಆಫ್ ನರ್ಸಿಂಗ್​​ನಲ್ಲಿ ಪ್ರವೇಶ ಪಡೆದುಕೊಂಡಿದ್ದರು.

ಇದಕ್ಕಾಗಿ ಅವರಿಗೆ 2013ರ ಆಗಸ್ಟ್ 7 ರಿಂದ 2014ರ ಆಗಸ್ಟ್ 6ರವರೆಗೆ ವಿದ್ಯಾರ್ಥಿ ವೀಸಾ ಮಂಜೂರು ಮಾಡಿದ್ದರು. ಭಾಷೆಯ ತೊಂದರೆ ಮತ್ತು ಅನಾರೋಗ್ಯದ ಪರಿಣಾಮ ಶಿಕ್ಷಣ ಮುಂದುವರೆಸಲಾಗಿರಲಿಲ್ಲ. ಪರಿಣಾಮ 2016ರ ಮೇ 28 ರಂದು ಯೆಮನ್‌ಗೆ ಹಿಂತಿರುಗಿದ್ದರು. ಇದಾದ ಬಳಿಕ ತಮ್ಮ ಮುಂದಿನ ಅಧ್ಯಯನ ಮತ್ತು ಪದವಿ ಕೋರ್ಸಿಗೆ ಮರು ಪ್ರವೇಶಕ್ಕೆ 2016ರ ಅಕ್ಟೋಬರ್ 14ರಂದು ಸಂದರ್ಶಕ ವೀಸಾದಲ್ಲಿ ಭಾರತಕ್ಕೆ ಮರಳಿದರು.

ಭಾರತಕ್ಕೆ ಬಂದ ಬಳಿಕ ಆರೋಗ್ಯವು ಮತ್ತೆ ಹದಗೆಟ್ಟಿತು. ಹೀಗಾಗಿ ಅವರು ಸಂದರ್ಶಕ ವೀಸಾವನ್ನು ವೈದ್ಯಕೀಯ ವೀಸಾವಾಗಿ ಪರಿವರ್ತಿಸಿದರು. ಈ ಪರಿವರ್ತಿಸಿದ ವೀಸಾದ ಅವಧಿ 2023ರ ಜೂನ್ 5 ಕ್ಕೆ ಕೊನೆಗೊಂಡಿತ್ತು. ನಂತರ ಅವರು ಎಫ್‌ಆರ್‌ಆರ್‌ಒಗೆ ಮತ್ತೆ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಿದರು. ಆದರೆ, ಎಫ್‌ಆರ್‌ಆರ್‌ಒ ವೈದ್ಯಕೀಯ ವೀಸಾ ಅವಧಿ ವಿಸ್ತರಣೆ ಮಾಡಲಿಲ್ಲ. ಹೀಗಾಗಿ ಎಫ್‌ಆರ್‌ಆರ್‌ಒ ಕ್ರಮ ಪ್ರಶ್ನಿಸಿ ಮೊಹಮ್ಮದ್ ನೋಮನ್ ಅಹ್ಮದ್ ಅಲ್ಮೇರಿ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇನ್ನು ವಿಸ್ತರಣೆಯ ಪರಿಗಣನೆ ಬಾಕಿ ಇರುವಾಗಲೇ ಅವರು ಶೆನಾಜ್ ಖಾನುಮ್ ಎಂಬ ಭಾರತೀಯರೊಬ್ಬರನ್ನು ಮೊಹಮ್ಮದ್ ನೋಮನ್ ಅಹ್ಮದ್ ಅಲ್ಮೇರಿ ವಿವಾಹವಾಗಿದ್ದರು. ಏಳು ವರ್ಷಕ್ಕಿಂತ ಹೆಚ್ಚುಕಾಲ ಭಾರತದಲ್ಲಿ ನೆಲೆಸಿದ್ದೇನೆ. ಅಷ್ಟೇ ಅಲ್ಲ ಭಾರತೀಯ ಪ್ರಜೆಯನ್ನು ಮದುವೆಯಾಗಿದ್ದು, ಭಾರತೀಯ ಪೌರತ್ವ ನೀಡಬೇಕು ಎಂದು ಅರ್ಜಿ ಸಲ್ಲಿಸಿದರು.

ಈ ಅರ್ಜಿಯನ್ನು 2021ರ ಆಗಸ್ಟ್ 14 ರಂದು ವಜಾಗೊಳಿಸಲಾಗಿತ್ತು. ಜೊತೆಗೆ, ವೀಸಾ ವಿಸ್ತರಣೆಗೆ ಕೋರಿದ್ದ ಅರ್ಜಿ ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅಲ್ಮೇರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ನ್ಯಾಯಾಲಯದ ಪರಿಶೀಲನೆಗಾಗಿ ಮುಚ್ಚಿದ ಲಕೋಟೆಯಲ್ಲಿ ಅರ್ಜಿದಾರರ ಕುರಿತು ಮಾಹಿತಿ ನೀಡಿದ್ದರು. ಇದನ್ನು ಪರಿಶೀಲಿಸಿದಾಗ ಅರ್ಜಿದಾರ ಅಲ್ಮೇರಿ, ಟ್ರಸ್ಟ್‌ವೆಲ್ ಆಸ್ಪತ್ರೆ ನೀಡಿದ ಪತ್ರದ ಆಧಾರದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಾಗಿ ತಿಳಿಸಿ ಹಲವಾರು ಯೆಮೆನ್ ಪ್ರಜೆಗಳನ್ನು ಭಾರತಕ್ಕೆ ಕರೆ ತರುವ ಮತ್ತು ಇಲ್ಲಿ ಉದ್ಯೋಗ ಕೊಡಿಸುವ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಅಂಶ ಬಹಿರಂಗವಾಗಿತ್ತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಯೆಮೆನ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಗಮನಿಸಬೇಕಾಗಿದೆ. ಅರ್ಜಿಯನ್ನು ಅರ್ಹತೆಯ ಮೇರೆಗೆ ಪರಿಗಣಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಹಿಂದಿನ ಲೇಖನಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಬಹುತೇಕ ಅಂತಿಮ: ಇಂದು ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ವರಿಷ್ಠರ ಮಧ್ಯೆ ಮಾತುಕತೆ ಸಾಧ್ಯತೆ
ಮುಂದಿನ ಲೇಖನಪ್ಯಾಲೆಸ್ತೀನಿಯರಿಗೆ ಬೆಂಬಲ: ಪಾಕ್ ವಿರುದ್ಧದ ಟೆಸ್ಟ್‌ನಲ್ಲಿ ಕಪ್ಪು ಪಟ್ಟಿ ಧರಿಸಿದ್ದ ಉಸ್ಮಾನ್ ಖವಾಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ