ಮನೆ ಕಾನೂನು ಪ್ರತ್ಯೇಕತಾವಾದಿಗಳು ವಿರೂಪಗೊಳಿಸಿದ್ದ ₹30 ಕೋಟಿ ನೋಟು ಆರ್‌ಬಿಐ ವಿನಿಮಯ ಮಾಡಿದ ಆರೋಪ: ಪಿಐಎಲ್ ತಿರಸ್ಕರಿಸಿದ ಸುಪ್ರೀಂ

ಪ್ರತ್ಯೇಕತಾವಾದಿಗಳು ವಿರೂಪಗೊಳಿಸಿದ್ದ ₹30 ಕೋಟಿ ನೋಟು ಆರ್‌ಬಿಐ ವಿನಿಮಯ ಮಾಡಿದ ಆರೋಪ: ಪಿಐಎಲ್ ತಿರಸ್ಕರಿಸಿದ ಸುಪ್ರೀಂ

0

ಕಾಶ್ಮೀರಿ ಪ್ರತ್ಯೇಕತಾವಾದಿ ಗುಂಪು 2013ರಲ್ಲಿ ವಿರೂಪಗೊಳಿಸಿದ್ದ ₹ 30 ಕೋಟಿ ಮೌಲ್ಯದ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿನಿಮಯ ಮಾಡಿಕೊಟ್ಟಿದೆ ಎಂದು ದೂರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್ ಈಚೆಗೆ ವಜಾಗೊಳಿಸಿದೆ.

Join Our Whatsapp Group

ಘಟನೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಮಾಡಲಾಗಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿತು.

ತಾನು ಆರ್‌ಬಿಐನಿಂದ ವಜಾಗೊಂಡ ಉದ್ಯೋಗಿ ಎಂಬ ಅಂಶವನ್ನು ಅರ್ಜಿದಾರ ಸತೀಶ್ ಭಾರದ್ವಾಜ್ ಅವರು ಮುಚ್ಚಿಟ್ಟಿದ್ದರು ಎಂದು ತಿಳಿದ ನ್ಯಾಯಾಲಯ ಈ ವಾಸ್ತವಾಂಶವನ್ನು ಮರೆಮಾಚಿರುವುದು ಪಿಐಎಲ್‌ನ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ.

“ಸಾರ್ವಜನಿಕ ಹಿತಾಸಕ್ತಿ ಪ್ರಸ್ತಾಪಿಸಿ ಸಲ್ಲಿಸಲಾದ ಈ ರಿಟ್ ಅರ್ಜಿಯನ್ನು ಪರಿಗಣಿಸುವ ಇಚ್ಛೆ ಇಲ್ಲ. ಹೀಗಾಗಿ ವಜಾಗೊಳಿಸಲಾಗಿದೆ. ಆದರೂ, ಈವಿಚಾರವಾಗಿ ತೀರ್ಪು ನೀಡಲೇಬೇಕೆಂದು ಇದ್ದರೆ ಸೂಕ್ತ ರೀತಿಯಲ್ಲಿ ಪ್ರಕರಣ ಸಾಗಬೇಕು ಎಂದು ನ್ಯಾಯಾಲಯ ಜನವರಿ 10ರ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರಾದ ಸತೀಶ್ ಭಾರದ್ವಾಜ್ ಅವರು 2019 ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರತ್ಯೇಕತಾವಾದಿ ಘೋಷಣೆಗಳನ್ನು ಮುದ್ರಿಸುವ ಮೂಲಕ ಸುಮಾರು ₹ 30 ಕೋಟಿ ಮೌಲ್ಯದ ಭಾರತೀಯ ಕರೆನ್ಸಿ ನೋಟುಗಳನ್ನು ತಾನು ನಾಲ್ಕು ತಿಂಗಳ ಅವಧಿಯಲ್ಲಿ.ವಿರೂಪಗೊಳಿಸಿರುವುದಾಗಿ ಕಾಶ್ಮೀರಿ ಪ್ರತ್ಯೇಕತಾವಾದಿ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿತ್ತು

ಆರ್‌ಬಿಐ ಕಾಯಿದೆ ಮತ್ತು ಆರ್‌ಬಿಐ (ನೋಟು ಮರುಪಾವತಿ) ನಿಯಮಾವಳಿ- 2009 ಅನ್ನು ಉಲ್ಲಂಘಿಸಿ ಆರ್‌ಬಿಐನ ಜಮ್ಮು ಪ್ರಾದೇಶಿಕ ಶಾಖೆ ಈ ನೋಟುಗಳನ್ನು ವಿನಿಮಯ ಮಾಡಿಕೊಂಡಿದೆ ಎಂದು ಭಾರದ್ವಾಜ್ ದೂರಿದ್ದರು.

2020ರಲ್ಲಿ, ಸ್ಥಿತಿಗತಿ ವರದಿ ಕೇಳಿದ್ದ ಸುಪ್ರೀಂ ಕೋರ್ಟ್‌ ಪ್ರಕರಣ ಸೂಕ್ಷ್ಮ ಸಮಸ್ಯೆಗಳನ್ನು ಒಳಗೊಂಡಿದೆ ಎಂದಿತ್ತು. ಆದರೆ ಭಾರದ್ವಾಜ್ ಆರ್‌ಬಿಐನಿಂದ ವಜಾಗೊಂಡ ಉದ್ಯೋಗಿ ಎಂದು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಪಿಐಎಲ್‌ ವಿಚಾರಣೆ ಮುಂದುವರೆಸುವುದು ಸೂಕ್ತವಲ್ಲ ಎಂದ ನ್ಯಾಯಾಲಯ ಅದನ್ನು ವಜಾಗೊಳಿಸಿತು.

ಅದರಂತೆ ಕೋರ್ಟ್ ಪಿಐಎಲ್ ವಜಾಗೊಳಿಸಿದೆ. ಈ ಮನವಿಯಲ್ಲಿ ಎತ್ತಿರುವ ಸಮಸ್ಯೆಗಳನ್ನು ಹೆಚ್ಚು ಸೂಕ್ತವಾದ ಸಂದರ್ಭದಲ್ಲಿ ಪರಿಶೀಲಿಸಬಹುದು ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಖುದ್ದು ಹಾಜರಾಗಿದ್ದರು.