ಮನೆ ಕಾನೂನು ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ. ಅನಿಲ್ ಖುರಾನಾ ನೇಮಕ ವಜಾ ಆದೇಶ ಎತ್ತಿ ಹಿಡಿದ...

ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ. ಅನಿಲ್ ಖುರಾನಾ ನೇಮಕ ವಜಾ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

0

ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರನ್ನಾಗಿ ಡಾ. ಅನಿಲ್ ಖುರಾನಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ 2021ರ ಜುಲೈ 5ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಪುರಸ್ಕರಿಸಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಇನ್ನೂ ಐದು ತಿಂಗಳು ಸೇವಾವಧಿ ಬಾಕಿ ಇರುವಾಗಲೇ ಡಾ. ಖುರಾನಾ ಹುದ್ದೆ ತೊರೆಯಬೇಕಿದೆ.

Join Our Whatsapp Group

ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರನ್ನಾಗಿ ಡಾ. ಅನಿಲ್ ಖುರಾನಾ ಅವರನ್ನು ನೇಮಕ ಮಾಡಿರುವುದನ್ನು ಎತ್ತಿಹಿಡಿದ್ದ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಆಯುಷ್ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಅಮರಗೌಡ ಎಲ್. ಪಾಟೀಲ್ ಸಲ್ಲಿಸಿದ್ದ ಸಿವಿಲ್‌ ಮೇಲ್ಮನವಿಯನ್ನು ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ ದೀಂಪಕರ್‌ ದತ್ತ ಮತ್ತು ಮನಮೋಹನ್‌ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.

“ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರನ್ನಾಗಿ ಡಾ. ಅನಿಲ್ ಖುರಾನಾ ಅವರ ನೇಮಕಾತಿಯನ್ನು ಬದಿಗೆ ಸರಿಸಿ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾಡಿದ್ದ ಆದೇಶವನ್ನು ಎತ್ತಿ ಹಿಡಿಯಲಾಗಿದೆ. ವಿಭಾಗೀಯ ಪೀಠದ ಆದೇಶ ರದ್ದುಪಡಿಸಲಾಗಿದೆ. ಹೀಗಾಗಿ, ಬಾಕಿ ಇರುವ ಕೆಲಸಗಳನ್ನು ಪೂರೈಸಿ ಒಂದು ವಾರದಲ್ಲಿ ಖುರಾನಾ ಹುದ್ದೆ ತೊರೆಯಬೇಕು. ಈ ಅವಧಿಯಲ್ಲಿ ಡಾ. ಖುರಾನಾ ಯಾವುದೇ ನೀತಿ ಅಥವಾ ಹಣಕಾಸಿನ ವಿಚಾರದ ಸಂಬಂಧ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಆಯೋಗಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಬೇಕು. ಕಾನೂನಿನ ಅನ್ವಯ ಆಯ್ಕೆ ಪ್ರಕ್ರಿಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುತ್ತದೆ ಎಂದ ಭರವಸೆ ಮತ್ತು ನಂಬಿಕೆ ಹೊಂದಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಆಯೋಗದ ಅಧ್ಯಕ್ಷರಾಗಿ ಡಾ. ಖುರಾನಾ ಪಡೆದಿರುವ ಸೌಲಭ್ಯಗಳನ್ನು ಹಿಂದಿರುಗಿಸಬೇಕಿಲ್ಲ. ಆದರೆ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಕ್ಕೆ ಭವಿಷ್ಯದಲ್ಲಿ ದೊರೆಯುವ ಸೌಲಭ್ಯಗಳನ್ನು ರದ್ದುಗೊಳಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಆಯೋಗದ ಅಧ್ಯಕ್ಷರಾಗಲು ಹೋಮಿಯೋಪತಿ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷದ ಸೇವಾನುಭವ ಹೊಂದಿರಬೇಕು. ಆ 20 ವರ್ಷಗಳಲ್ಲಿ ಕನಿಷ್ಠ 10 ವರ್ಷಗಳ ಕಾಲ ಹೋಮಿಯೋಪತಿ ಮತ್ತದರ ಶಿಕ್ಷಣಕ್ಕೆ ಸಂಬಂಧಿಸಿದ ಅಭಿವೃದ್ಧಿ, ಬೆಳವಣಿಗೆ, ಆರೋಗ್ಯ ಸೇವೆ ಒದಗಿಸುವ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರಬೇಕು ಎಂದು ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಕಾಯಿದೆ-2020ರ ಸೆಕ್ಷನ್ 4(2) ಹೇಳುತ್ತದೆ. ಕಾಯಿದೆ ಅನ್ವಯ ಡಾ. ಖುರಾನಾ ಅಂತಹ ಸೇವಾನುಭವ ಹೊಂದಿಲ್ಲ ಮತ್ತು ಇಲಾಖಾ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿಲ್ಲ. ಹೀಗಾಗಿ, ಅವರ ನೇಮಕಾತಿ ಕಾಯಿದೆಗೆ ವಿರುದ್ಧವಾಗಿದೆ ಎಂದಿರುವ ನ್ಯಾಯಾಲಯವು ಹೈಕೋರ್ಟ್‌ನ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿತ್ತು. ಈ ಆದೇಶವನ್ನು ವಿಭಾಗೀಯ ಪೀಠವು ಬದಿಗೆ ಸರಿಸಿತ್ತು. ಈಗ ಸುಪ್ರೀಂ ಕೋರ್ಟ್‌ ಏಕಸದಸ್ಯ ಪೀಠದ ಆದೇಶ ಸೂಕ್ತವಾಗಿ ಎಂದು ಅಭಿಪ್ರಾಯಪಟ್ಟಿದೆ.

ನಾಲ್ಕು ವರ್ಷಗಳ ಅವಧಿಗೆ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಡಾ. ಖುರಾನಾ ಅವರು 2025ರ ಜುಲೈ 4ರವರೆಗೆ ಅಧಿಕಾರದಲ್ಲಿ ಇರಬೇಕಿತ್ತು.