ಮನೆ ಕಾನೂನು ಪಾಲನೆಯಾಗದ ಸುಪ್ರೀಂ ತೀರ್ಪು: ಒಬಿಸಿ ಮೀಸಲಾತಿ ಇಲ್ಲದೆ ಯುಪಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಅಲಾಹಾಬಾದ್ ಹೈಕೋರ್ಟ್...

ಪಾಲನೆಯಾಗದ ಸುಪ್ರೀಂ ತೀರ್ಪು: ಒಬಿಸಿ ಮೀಸಲಾತಿ ಇಲ್ಲದೆ ಯುಪಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಅಲಾಹಾಬಾದ್ ಹೈಕೋರ್ಟ್ ಆದೇಶ

0

ಸುಪ್ರೀಂ ಕೋರ್ಟ್ ನಿಗದಿಪಡಿಸಿದ ತ್ರಿವಳಿ ಪರೀಕ್ಷಾ ಸೂತ್ರ ಪಾಲಿಸಲು ಒಬಿಸಿ ಮೀಸಲಾತಿಗಾಗಿ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ ಅಧಿಸೂಚನೆ ವಿಫಲವಾದ ಕಾರಣ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಇಲ್ಲದೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಅಲಾಹಾಬಾದ್ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. 

ಒಬಿಸಿ ಮೀಸಲಾತಿ ಇಲ್ಲದೆ ತುರ್ತು ಆಧಾರದಲ್ಲಿ ಚುನಾವಣೆ ನಡೆಸುವಂತೆ ನ್ಯಾಯಮೂರ್ತಿಗಳಾದ ಸೌರಭ್ ಲವಾನಿಯಾ ಮತ್ತು ಡಿ ಕೆ ಉಪಾಧ್ಯಾಯ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದರು. ಆದರೆ ಸಂವಿಧಾನದ ಪ್ರಕಾರ ಮಹಿಳಾ ಮೀಸಲಾತಿ ಒದಗಿಸುವಂತೆ ಆದೇಶಿಸಲಾಯಿತು.

ಚುನಾವಣೆಯಲ್ಲಿ ತ್ರಿವಳಿ ಸೂತ್ರ   ಪಾಲಿಸದೆ ಒಬಿಸಿ ಮೀಸಲಾತಿ ಒದಗಿಸುವ ರಾಜ್ಯ ಸರ್ಕಾರದ ಕರಡು ಅಧಿಸೂಚನೆ  ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿತು.

ವಿಕಾಸ್ ಕಿಶನ್ರಾವ್ ಗಾವಳಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿರುವ ತ್ರಿವಳಿ ಪರೀಕ್ಷೆಯ ಪ್ರಕಾರ, ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನ ಮೀಸಲಿಡುವ ಮೊದಲು ಸರ್ಕಾರ ಈ ಕೆಳಗಿನ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ:

• ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಒದಗಿಸುವುದಕ್ಕೆ ಸಂಬಂಧಿಸಿದಂತೆ ಸಮುದಾಯಗಳ ಹಿಂದುಳಿದಿರುವಿಕೆಯ ಸ್ವರೂಪ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಆಯೋಗ ರಚಿಸಬೇಕು.

• ಈ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ನಿಗದಿಪಡಿಸಬೇಕು.

• ಮೀಸಲಾತಿ ಶೇ.50ರ ಮಿತಿಯನ್ನು ಉಲ್ಲಂಘಿಸುವಂತಿಲ್ಲ.

ಸ್ಥಳೀಯ ಸ್ವಯಂ ಆಡಳಿತ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಉದ್ದೇಶಕ್ಕಾಗಿ ಹಿಂದುಳಿದಿರುವಿಕೆಯ ಸ್ವರೂಪ ಮತ್ತು ಪರಿಣಾಮಗಳ ಕುರಿತು ಪ್ರಾಯೋಗಿಕ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಪ್ರತ್ಯೇಕ ಆಯೋಗ ಸ್ಥಾಪಿಸಿಲ್ಲ. ಆ ಮೂಲಕ ಕಾಯಿದೆಯಲ್ಲಿ ಅಗತ್ಯ ಬದಲಾವಣೆ ಮಾಡಿಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು.

ಆದ್ದರಿಂದ, ಸುಪ್ರೀಂ ಕೋರ್ಟ್’ನ ಸಾಂವಿಧಾನಿಕ ಪೀಠ ಘೋಷಿಸಿದ ಕಾನೂನಿಗೆ ಅನುಗುಣವಾಗಿ ತನ್ನ ಕಾಯಿದೆಯನ್ನು ಹೊಸದಾಗಿ ಪರಾಮರ್ಶಿಸಿ ತನ್ನ ನೀತಿಯನ್ನು ಮರು ರೂಪಿಸಿಕೊಳ್ಳುವುದು ಸರ್ಕಾರದ ಹೊಣೆಗಾರಿಕೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಹೀಗಾಗಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಹಿಂದುಳಿದ ವರ್ಗದ ನಾಗರಿಕರಿಗೆ ಮೀಸಲಾತಿ ನೀಡುವ ಉದ್ದೇಶಕ್ಕಾಗಿ ಹಿಂದುಳಿದಿರುವಿಕೆಯ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಪ್ರಾಯೋಗಿಕ ಅಧ್ಯಯನ ಕೈಗೊಳ್ಳಲು ಪ್ರತ್ಯೇಕ ಆಯೋಗ  ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಇತರೆ ಹಿಂದುಳಿದ ವರ್ಗಕ್ಕೆ ತಮ್ಮನ್ನು ಸೇರ್ಪಡಿಸುವಂತೆ ಲೈಂಗಿಕ ಅಲ್ಪಸಂಖ್ಯಾತರು ಕೋರಿರುವ ಹಕ್ಕುಗಳನ್ನು ಕೂಡ ಪರಿಗಣಿಸಬೇಕು ಎಂದು ಕೂಡ ನ್ಯಾಯಾಲಯ ಆದೇಶಿಸಿದೆ.

ಹಿಂದಿನ ಲೇಖನಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ, ಅವರಿಗೆ ಧನ್ಯವಾದ: ಪ್ರಧಾನಿ ಸಹೋದರ ಪ್ರಹ್ಲಾದ ದಾಮೋದರ ಮೋದಿ
ಮುಂದಿನ ಲೇಖನಬೆಂಗಳೂರು ಜಲಮಂಡಳಿ ವಾಟರ್ ಬಿಲ್’​ಗೆ ಕನ್ನ: ಸಿಬ್ಬಂದಿ ಸೇರಿದಂತೆ 9 ಮಂದಿ ಬಂಧನ