ಮನೆ ಮನರಂಜನೆ 10 ಭಾಷೆಗಳಲ್ಲಿ ಬರಲಿದೆ ಸೂರ್ಯ ಹೊಸ ಸಿನಿಮಾ ‘ಕಂಗುವ’

10 ಭಾಷೆಗಳಲ್ಲಿ ಬರಲಿದೆ ಸೂರ್ಯ ಹೊಸ ಸಿನಿಮಾ ‘ಕಂಗುವ’

0

ನಟ ಸೂರ್ಯ ಅಭಿನಯದ ಹೊಸ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಈ ಬಿಗ್ ಬಜೆಟ್ ಸಿನಿಮಾದ ಟೈಟಲ್ ಬಗ್ಗೆ ಆರಂಭದಿಂದಲೂ ಸಾಕಷ್ಟು ಚರ್ಚೆ ಆಗುತ್ತಿತ್ತು. ಆದರೆ ಇದರ ಟೈಟಲ್ ಏನು ಎಂಬುದರ ಬಗ್ಗೆ ಮಾತ್ರ ಚಿತ್ರತಂಡ ಈವರೆಗೂ ಮಾಹಿತಿ ಹಂಚಿಕೊಂಡಿರಲಿಲ್ಲ. ಇದೀಗ ಆ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಪ್ಯಾನ್ ಇಂಡಿಯಾ ಸಿನಿಮಾಗೆ ‘ಕಂಗುವ’ ಎಂದು ಟೈಟಲ್ ಇಡಲಾಗಿದೆ. ಇದು ಸೂರ್ಯ ನಟನೆಯ 42ನೇ ಸಿನಿಮಾವಾಗಿದೆ.

Join Our Whatsapp Group


ಮೋಷನ್ ಪೋಸ್ಟರ್ ರಿಲೀಸ್
ಈಚೆಗೆ ‘ಸೂರರೈ ಪೋಟ್ರು’, ‘ಜೈ ಭೀಮ್’, ‘ಈಟಿ’ ಥರದ ಹಿಟ್ ಸಿನಿಮಾಗಳನ್ನು ನೀಡಿರುವ ನಟ ಸೂರ್ಯ, ‘ವಿಕ್ರಮ್’ ಸಿನಿಮಾದ ‘ರೋಲೆಕ್ಸ್’ ಪಾತ್ರದಿಂದಲೂ ಸಾಕಷ್ಟು ಕ್ರೇಜ್ ಹುಟ್ಟುಹಾಕಿದ್ದಾರೆ. ಇದೀಗ ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಕಂಗುವ’ ಮೂಲಕ ದೊಡ್ಡ ಸದ್ದು ಮಾಡುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾವನ್ನು 10 ಭಾಷೆಗಳಲ್ಲಿ ರಿಲೀಸ್ ಮಾಡುತ್ತಿರುವುದು ವಿಶೇಷ.
ಶಿವ ನಿರ್ದೇಶನದ ಸಿನಿಮಾ
ಈ ಹಿಂದೆ ನಟ ಅಜಿತ್ ಜೊತೆಗೆ ‘ವೀರಂ’, ‘ವಿಶ್ವಾಸಂ’ ಹಾಗೂ ‘ಸೂಪರ್ ಸ್ಟಾರ್’ ರಜನಿಕಾಂತ್ ಜೊತೆಗೆ ‘ಅಣ್ಣಾಥೆ’ ಸಿನಿಮಾಗಳನ್ನು ಮಾಡಿರುವ ನಿರ್ದೇಶನ ಶಿವ ಇದೇ ಮೊದಲ ಬಾರಿಗೆ ಸೂರ್ಯಗೆ ನಿರ್ದೇಶನ ಮಾಡುತ್ತಿದ್ದಾರೆ. ಶಿವ ಕರಿಯರ್ನಲ್ಲೂ ಕೂಡ ‘ಕಂಗುವ’ ದೊಡ್ಡ ಬಜೆಟ್ ನ ಸಿನಿಮಾ ಹಾಗೂ ಪ್ಯಾನ್ ಇಂಡಿಯಾ ಚಿತ್ರ.
‘ಕಂಗುವ ಚಿತ್ರವು 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.
‘ಕಂಗುವ’ ಸಿನಿಮಾವನ್ನು ಸ್ಟುಡಿಯೋ ಗ್ರೀನ್ ಸಂಸ್ಥೆಯ ಕೆ ಇ ಜ್ಞಾನವೇಲ್ ರಾಜ ಹಾಗೂ ತೆಲುಗಿನ ಯುವಿ ಪ್ರೊಡಕ್ಷನ್ಸ್ನ ವಂಶಿ ಮತ್ತು ಪ್ರಮೋದ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಬಹುಕೋಟಿ ವೆಚ್ಚದ ‘ಕಂಗುವ’ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರಕ್ಕೆ ಹಾಸ್ಯ ನಟ ಯೋಗಿ ಬಾಬು ಬಣ್ಣ ಹಚ್ಚಿದ್ದಾರೆ.
‘ಕಂಗುವ’ ಸಿನಿಮಾಗೆ ವೆಟ್ರಿ ಪಳನಿಸಾಮಿ ಛಾಯಾಗ್ರಹಣ ಮಾಡುತ್ತಿದ್ದು, ದೇವಿಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ ಇದೆ. ಈ ಚಿತ್ರದ ವಿಎಫ್ ಎಕ್ಸ್ ಗೆ ಸಾಕಷ್ಟು ಹಣ ಖರ್ಚಾಗಲಿದೆಯಂತೆ. ‘ಕಂಗುವ’ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗಿರುವುದರಿಂದ 2024ರ ಆರಂಭದಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಗೋವಾ, ಚೆನ್ನೈ ಮುಂತಾದ ಕಡೆ ಈಗಾಗಲೇ ‘ಕಂಗುವ’ ಚಿತ್ರಕ್ಕೆ ಶೇ.50ರಷ್ಟು ಚಿತ್ರೀಕರಣ ಮುಗಿದಿದೆ. ಶೀಘ್ರದಲ್ಲೇ ರಿಲೀಸ್ ಡೇಟ್ ಘೋಷಣೆ ಮಾಡಲು ‘ಕಂಗುವ’ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಹಿಂದಿನ ಲೇಖನನನಗೆ ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ ಕಾರಣ: ವಾಸು
ಮುಂದಿನ ಲೇಖನಕೃಷ್ಣರಾಜ ಕ್ಷೇತ್ರ: ರಾಮದಾಸ್’ಗೆ ಕೈ ತಪ್ಪಿದ ಟಿಕೆಟ್, ಟಿ.ಎಸ್.ಶ್ರೀವತ್ಸಗೆ ಅವಕಾಶ