ಬೆಂಗಳೂರು: ಬೇರೊಬ್ಬನ ಜೊತೆ ಅನೈತಿಕ ಸಂಬಂಧದ ಅನುಮಾನದ ಮೇಲೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ.
ಶೇಕ್ ಮುಜೀಬ್ ಎನ್ನುವಾತ ನೈಗರ್ (28) ಎನ್ನುವಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಹೆಂಡ್ತಿ ಬೇರೊಬ್ಬನ ಜತೆ ಸಂಬಂಧ ಹೊಂದಿದ್ದಾಳೆಂದು ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ನೈಗರ್ ಳ ತಲೆಗೆ ಮಚ್ಚಿನ ಏಟು ಬಿದ್ದಿದ್ದು, ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಶೇಕ್ ಮುಜೀಬ್ ನನ್ನು ಜೆ ಬಿ ನಗರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನೈಗರ್ ಳನ್ನ ಪ್ರೀತಿಸಿ ಮದುವೆಯಾಗಿದ್ದ ಹೊಸಕೋಟೆ ಮೂಲದ ಶೇಕ್ ಮುಜೀಬ್, ಆರ್ ಟಿ ನಗರದಲ್ಲಿ ನೆಲೆಸಿದ್ದ. ನೈಗರ್, ಮುರುಗೇಶ್ ಪಾಳ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಆರೋಪಿ ಶೇಕ್ ಮುಜೀಬ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಯುವಕನ ಜೊತೆ ಸಂಬಂಧ ಇದೆ ಎಂದು ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ನೈಗರ್ ಳನ್ನ ಕೆಲಸಕ್ಕೆ ಹೋಗುವುದನ್ನ ಬಿಡಿಸಬೇಕು ಎಂದು ಪ್ಲ್ಯಾನ್ ಮಾಡಿದ್ದ. ಹೀಗಾಗಿ ಆಕೆಯ ಕೈ ಬೆರಳು ಕಟ್ ಮಾಡಬೇಕೆಂದುಕೊಂಡಿದ್ದ. ಯಾಕಂದ್ರೆ ಬೆರಳುಗಳನ್ನ ಕತ್ತರಿಸಿದರೆ ಕೆಲಸ ಮಾಡಲು ಆಗುವುದಿಲ್ಲ. ಮನೆಯಲ್ಲೇ ಇರುತ್ತಾಳೆ ಎಂದು ತೀರ್ಮಾನಿಸಿ ಶಿವಾಜಿನಗರದಲ್ಲಿ ಮಚ್ಚು ಖರೀದಿಸಿರುವುದನ್ನು ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.