ಮನೆ ಕಾನೂನು ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಕಣ್ಣೂರು ಶ್ರೀ ಸೇರಿ ಮೂವರಿಗೆ 14 ದಿನ ನ್ಯಾಯಾಂಗ ಬಂಧನ

ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಕಣ್ಣೂರು ಶ್ರೀ ಸೇರಿ ಮೂವರಿಗೆ 14 ದಿನ ನ್ಯಾಯಾಂಗ ಬಂಧನ

0

ರಾಮನಗರ ಜಿಲ್ಲೆ ಕಂಚುಗಲ್‌ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್‌ ಮಾಡಿದ್ದ ಆರೋಪದ ಮೇಲೆ ಮಾಗಡಿ ತಾಲೂಕಿನ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನೀಲಾಂಬಿಕೆ (ಚಂದು) ಹಾಗೂ ಕಣ್ಣೂರು ಮಠದ ವಕೀಲ ಮಹಾದೇವಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಮೂವರನ್ನೂ ಇಂದು (ಅ. 30) ಬಂಧಿಸಿದ  ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಪ್ರಕರಣದ ಮೂವರೂ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪುರುಷ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದ್ದು ಯುವತಿಯನ್ನು ಬೆಂಗಳೂರಿನ ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಡೆಮಠದ ಶ್ರೀಗಳಿಗೂ ಮತ್ತು ಕಣ್ಣೂರು ಮಠದ ಸ್ವಾಮೀಜಿಗೂ ವೈಷಮ್ಯ ಇತ್ತು. ಅವರಿಬ್ಬರೂ ಪೂರ್ವಾಶ್ರಮದಲ್ಲಿ ಸೋದರ ಸಂಬಂಧಿಗಳಾಗಿದ್ದರು. ಎರಡೂ ಮಠಗಳ ನಡುವೆ ಆಸ್ತಿಗೆ ಸಂಬಂಧಿಸಿದ ವಿವಾದ ಇತ್ತು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಬಳಸಿಕೊಂಡು ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಹನಿಟ್ರ್ಯಾಪ್‌ ಮಾಡಿಸಿದ್ದರು ಎನ್ನಲಾಗಿದೆ.

ಬಸವಲಿಂಗ ಸ್ವಾಮೀಜಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಯುವತಿ ಅಶ್ಲೀಲ ವೀಡಿಯೊ ತಯಾರಿಸಿದ್ದರು. ಅದನ್ನು ಪಡೆದಿದ್ದ ವಕೀಲ ಮಹಾದೇವಯ್ಯ ತುಮಕೂರಿನಲ್ಲಿ ಸಿ ಡಿ ಮಾಡಿಸಿ ಸಂಬಂಧಪಟ್ಟವರಿಗೆ ಹಂಚಿದ್ದರು ಎಂಬ ಆರೋಪ ಇದೆ.