ಮನೆ ಮನರಂಜನೆ “ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ವಿಮರ್ಶೆ

“ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ವಿಮರ್ಶೆ

0

ನಾಯಕ ತನ್ನ ಜೀವನದ ಕೊನೆಯ ಹಂತದಲ್ಲಿರುತ್ತಾನೆ. ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಮಧ್ಯ ವಯಸ್ಸಿನಲ್ಲಿಯೇ ಉಸಿರು ಚೆಲ್ಲುವ ಪರಿಸ್ಥಿತಿ ಆತನದ್ದು. ಸಾಯುವ ಮುನ್ನವಾದರೂ ನೆಮ್ಮದಿಗೆ ಕೈ ಚಾಚುತ್ತಾನೆ. ಸಾವಿನ ದವಡೆಗೆ ತಲುಪಿರುವುದರಿಂದ ತನ್ನೋರು ಅನ್ನೋರು ಯಾರೂ ಇರುವುದಿಲ್ಲ. ಹೀಗಾಗಿ ಈತ ಊರು ಬಿಟ್ಟು ಬಂದಿರುತ್ತಾನೆ. ನಾಯಕಿಗೆ ಮೊದ ಮೊದಲು ಈತನ ವರ್ತನೆ ಇಷ್ಟವಾಗದಿದ್ದರೂ, ಮುಂದೆ ಆತನಿಲ್ಲದೇ ಬದುಕುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಬಾಂಧವ್ಯ ಬೇರೂರಿರುತ್ತದೆ. ಆದರೆ ಆಕೆ ಗೃಹಿಣಿ..!

ಇದು “ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಕಥಾಸಾರಾಂಶ. ಒಟ್ಟಾರೆ ಸಿನಿಮಾವನ್ನು ಕವನದ ರೂಪಕದಂತೆ ಕಟ್ಟಿಕೊಟ್ಟಿದ್ದಾರೆ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ. ಯಾವುದೇ ಅಬ್ಬರವಿಲ್ಲದೇ ತಣ್ಣನೆಯ ಗಾಳಿಯಂತೆ ಕತೆಯನ್ನು ನಿರೂಪಿಸುತ್ತಾರೆ… ಪಾತ್ರ ಪೋಷಣೆಯಲ್ಲೂ ಅಷ್ಟೇ ಅಚ್ಚುಕಟ್ಟು. ಹೆಣ್ಣಿನ ಒಳಮನಸ್ಸು, ಆಕೆಯ ಸುಖ-ದುಃಖ, ಬೇಕು-ಬೇಡಗಳನ್ನು ಸಮರ್ಪಕವಾಗಿ ತೆರೆಯ ಮೇಲೆ ಹರಡಿದ್ದಾರೆ.

ಮಳೆಯ ಹನಿ, ಇಬ್ಬನಿ, ನಂದಿ ಬಟ್ಲು ಹೂ, ಗಿಡ, ಮರ, ಎಲೆ… ಎಲ್ಲವನ್ನೂ ಕತೆಯೊಳಗೆ ತಂದು ಕೂರಿಸಿದ್ದಾರೆ. ಹೀಗಾಗಿ ಪಾತ್ರಗಳು ಕೆಲವೊಮ್ಮೆ ಮಾತನಾಡದಿದ್ದರೂ, ಪ್ರತಿ ಫ್ರೇಮ್‌ನಲ್ಲೂ ಮಾತು ಧ್ವನಿಸುವಂತೆ ದೃಶ್ಯಗಳನ್ನು ಕಟ್ಟಿಕೊಡುವಲ್ಲಿ ರಾಜ್‌ ಸಫ‌ಲರಾಗಿದ್ದಾರೆ.

ನಟನೆ, ನಿರ್ದೇಶನ ಎರಡರಲ್ಲೂ ರಾಜ್‌ ನೀರು ಕುಡಿದಷ್ಟೇ ಸರಾಗವಾಗಿ ಸರಿದೂಗಿಸಿಕೊಂಡು ಹೋಗಿದ್ದಾರೆ. ಸಿರಿ ಸಿನಿಮಾ ಮುಗಿದ ಮೇಲೂ ಕಾಡುತ್ತಾರೆ. ಮಿದುನ್‌ ಸಂಗೀತ, ಪ್ರವೀಣ್‌ ಶ್ರೀಯಾನ್‌ ಕ್ಯಾಮೆರಾ ಕೆಲಸ ಮುತ್ತಿನಷ್ಟೇ ಹೊಳಪು ಮತ್ತು ಮೌಲ್ಯ ಕಾಪಾಡಿಕೊಂಡಿದೆ.