ಐರ್ಲೆಂಡ್ (Ireland): ಐರ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಮೂಲಕ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ನ್ಯೂಜಿಲೆಂಡ್‌ನ ಸ್ಪಿನ್ನರ್ ಮೈಕಲ್ ಬ್ರೇಸ್‌ವೆಲ್ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.
ಮೂರು ಎಸೆತಗಳಲ್ಲಿ ಕ್ರಮವಾಗಿ ಮಾರ್ಕ್ ಅದೈರ್ (27), ಬ್ಯಾರಿ ಮೆಕ್‌ಕ್ಯಾರ್ಥಿ (11) ಹಾಗೂ ಕ್ರೇಗ್ ಯಂಗ್ (0) ಅವರ ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ನ್ಯೂಜಿಲೆಂಡ್, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 174ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಆತಿಥೇಯ ಐರ್ಲೆಂಡ್ 13 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿತ್ತು. 14ನೇ ಓವರ್ ಬೌಲಿಂಗ್ ಮಾಡಿದ ಬ್ರೇಸ್‌ವೆಲ್ ಮೊದಲೆರಡು ಎಸೆತಗಳಲ್ಲಿ 5 ರನ್ ಬಿಟ್ಟುಕೊಟ್ಟರು. ನಂತರದ ಮೂರು ಎಸೆತದಲ್ಲಿ ಮೂರು ವಿಕೆಟ್ ಪಡೆದಿದ್ದಾರೆ.
ಹೀಗಾಗಿ ಐರ್ಲೆಂಡ್ ಆಟ 91 ರನ್‌ಗೆ ಕೊನೆಯಾಯಿತು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಎಸೆದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಬೌಲರ್ ಎಂಬ ಶ್ರೇಯಕ್ಕೆ ಭಾಜನರಾದರು. ಅವರು (ಬ್ರೇಸ್‌ವೆಲ್) ಮೊದಲ ಪಂದ್ಯದಲ್ಲಿ ಆಡಿದ್ದರಾದರೂ ಬೌಲಿಂಗ್ ಮಾಡಿರಲಿಲ್ಲ.
ಇದಕ್ಕೂ ಮೊದಲು ವೇಗಿಗಳಾದ ಜೇಕಬ್ ಓರಮ್ (2009, ಶ್ರೀಲಂಕಾ ವಿರುದ್ಧ) ಮತ್ತು ಟಿಮ್ ಸೌಥಿ (2010, ಪಾಕಿಸ್ತಾನ ವಿರುದ್ಧ) ನ್ಯೂಜಿಲೆಂಡ್ ಪರ ಈ ಮಾದರಿಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.
ಐರ್ಲೆಂಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ನ್ಯೂಜಿಲೆಂಡ್ 2–0 ಅಂತರದ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯವನ್ನು 31 ರನ್‌ಗಳಿಂದ ಗೆದ್ದಿದ್ದ ಮಿಚೆಲ್ ಸ್ಯಾಂಟ್ನರ್ ಬಳಗ, ಇದೀಗ ಎರಡನೇ ಪಂದ್ಯವನ್ನು 98 ರನ್‌ಗಳಿಂದ ಜಯಿಸಿದೆ. ಕೊನೇ ಪಂದ್ಯ ಜು.22 ರಂದು ನಡೆಯಲಿದೆ.