ಕೊಲಂವೊ : ಇಂದಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿಯೂ ಆಗಿರುವ ಜಿಂಬಾಬ್ವೆ ಆಟಗಾರ ಮುಜರಬಾನಿ ಬ್ಲೆಸ್ಸಿಂಗ್ ಅದ್ಭುತ ಪ್ರದರ್ಶನ ನೀಡಿ ಶೈನ್ ಆಗಿದ್ದಾರೆ. ಬ್ಲೆಸ್ಸಿಂಗ್ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ತಂಡ ಛಿದ್ರವಾಗಿ ಹೀನಾಯ ಸೋಲು ಕಂಡಿದೆ.
170 ರನ್ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ವಿರುದ್ಧ ಮುಜರಬಾನಿಗೆ ಬಿಗಿ ಹಿಡಿತ ಸಾಧಿಸುವ ಮೂಲಕ ತಂಡವನ್ನ ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಪವರ್ ಪ್ಲೇ ನಲ್ಲೇ ಜೋಶ್ ಇಂಗ್ಲಿಸ್, ಟಿಮ್ ಡೇವಿಡ್ ವಿಕೆಟ್ ತೆಗೆದ ಬ್ಲೆಸ್ಸಿಂಗ್ ನಿರ್ಣಾಯಕ ಹಂತದಲ್ಲಿ ಮ್ಯಾಟ್ ರೆನ್ಶಾ ವಿಕೆಟ್ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಒಟ್ಟು 4 ಓವರ್ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟ ಬ್ಲೆಸ್ಸಿಂಗ್ 4 ವಿಕೆಟ್ ಪಡೆಯುವ ಮೂಲಕ ಚೊಚ್ಚಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಮುಜರಬಾನಿ ಬ್ಲೆಸ್ಸಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಆಗಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ವೇಳೆ 2025ರ ಮೇ 26 ರಂದು ಬ್ಲೆಸ್ಸಿಂಗ್ ಆರ್ಸಿಬಿ ತಂಡವನ್ನ ಕೂಡಿಕೊಂಡರು. ಮೆಗಾ ಹರಾಜಿನಲ್ಲಿ ಮುಜರಬಾನಿಗೆ ಅವರನ್ನ ಆರ್ಸಿಬಿ ಖರೀದಿಸಿರಲಿಲ್ಲ. ಆದರೆ, ಇಂಜುರಿ ಕಾರಣದಿಂದ ಹೊರಗುಳಿದ ಲುಂಗಿ ಎನ್ಗಿಡಿ ಅವರ ಬದಲಿಗೆ ಆರ್ಸಿಬಿ ಬ್ಲೆಸ್ಸಿಂಗ್ರನ್ನ 75 ಲಕ್ಷ ರೂ.ಗೆ ಖರೀದಿ ಮಾಡಿತು.
ಆಸ್ಟ್ರೇಲಿಯಾ ವಿರುದ್ಧ ನಡೆದ ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ 23 ರನ್ಗಳ ಅಮೋಘ ಜಯ ಸಾಧಿಸಿದೆ. 2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನ ಮಣಿಸಿತ್ತು. ಇದೀಗ 19 ವರ್ಷಗಳ ಬಳಿಕ ಅದ್ಭುತ ಜಯ ಸಾಧಿಸಿ ಇತಿಹಾಸ ಪುನರ್ರಚಿಸಿದೆ.
ಬಿ-ಗುಂಪಿನಲ್ಲಿ ಶ್ರೀಲಂಕಾ ಆರಂಭಿಕ 2 ಪಂದ್ಯಗಳನ್ನ ಗೆದ್ದು ಅಗ್ರಸ್ಥಾನದಲ್ಲಿದೆ. ಜಿಂಬಾಬ್ವೆ ಕೂಡ 2 ಪಂದ್ಯ ಗೆದ್ದಿದ್ದರೂ ರನ್ರೇಟ್ ಕಾರಣದಿಂದ 2ನೇ ಸ್ಥಾನದಲ್ಲಿದೆ. ಫೆ.16 ರಂದು ಶ್ರೀಲಂಕಾ vs ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಒಂದು ವೇಳೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೆ, ಜಿಂಬಾಬ್ವೆ ಸೂಪರ್-8 ಹಂತಕ್ಕೆ ಜಿಗಿಯಲಿದೆ. ಆಸ್ಟ್ರೇಲಿಯಾ ಮನೆ ಕಡೆ ಮುಖ ಮಾಡಲಿದೆ. ಜಿಂಬಾಬ್ವೆ ಸೂಪರ್-8 ಹಂತ ತಲುಪಿದೆ.















